ಉದಯವಾಹಿನಿ, ಮಲೇಬೆನ್ನೂರು: ಸಮೀಪದ ಕೊಮಾರನಹಳ್ಳಿ ಹೆಳವನಕಟ್ಟೆ ಲಕ್ಷ್ಮಿ ರಂಗನಾಥ ದೇವಾಲಯದ ಕೆರೆಗೆ ಪಶ್ಚಿಮಭಾಗದ 2 ಹಳ್ಳಗಳಿಂದ ಎರಡು ದಿನಗಳಿಂದ ನೀರು ಹರಿದುಬರುತ್ತಿದೆ.ಪ್ರಸಕ್ತ ಮಳೆಗಾಲ ಆರಂಭವಾದಾಗಿನಿಂದಲೂ ಕೆರೆಗೆ ನೀರು ಹರಿದು ಬರದೆ ಕೊಳವೆಬಾವಿ ಆಶ್ರಿತ ತೋಟಗಾರರ ನೆಮ್ಮದಿ ಕೆಡಿಸಿತ್ತು.ಮಳೆ ಬಂದ ವೇಳೆ ಮೇಲ್ಭಾಗದ ಚೆಕ್‌ ಡ್ಯಾಂ ಮೂಲಕ ನೀರು ಭೂಮಿ ಸೇರಿ ಇಂಗಿ ಹೋಗುತ್ತಿತ್ತು.
ಸುರಿದ ಭಾರಿ ಮಳೆಯಿಂದ ಹಳ್ಳಗಳ ಮೂಲಕ ಜಲಧಾರೆ ಕೆರೆ ಒಡಲು ಸೇರುತ್ತಿದ್ದು, ಹೊಂಡ ಗುಂಡಿಗಳು ತುಂಬುತ್ತಿವೆ. ಅಗಸನಹಳ್ಳದ ಭಾಗದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಬಾರಿ ಭಾರಿ ಪ್ರಮಾಣದಲ್ಲಿ ಹೂಳು ಎತ್ತಿರುವ ಕಾರಣ ನೀರಿನ ಸಂಗ್ರಹಣೆ ಹೆಚ್ಚಾಗುವ ವಿಶ್ವಾಸ ಇದೆ.
ಯಾವಾಗಲೂ ಮಳೆಗಾಲದ ಅಂತ್ಯದಲ್ಲಿ ಇಲ್ಲವೇ ದಸರಾ ವೇಳೆಗೆ ಕೆರೆ ಭರ್ತಿಯಾಗುತ್ತಿತ್ತು. ಆದರೆ, ಕೆರೆ ತಳಮಟ್ಟದವರೆಗೆ ಹೂಳು ಎತ್ತಿರುವ ಕಾರಣ, ಇಂಗುವಿಕೆ ಪ್ರಮಾಣ ಹೆಚ್ಚಾಗಲಿದೆ. ಕೆರೆ ಭರ್ತಿಯಾಗಲು ಭಾರಿ ಮಳೆ ಸುರಿಯಬೇಕಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕೆರೆಯ ಹೂಳನ್ನು ಸಮರ್ಪಕವಾಗಿ ಎತ್ತಲಿಲ್ಲ. ಭಾರಿ ಗಾತ್ರದ ಹೊಂಡ-ಗುಂಡಿಗಳು ಪಶ್ಚಿಮ ಭಾಗದಲ್ಲಿ ನಿರ್ಮಾಣವಾಗಿವೆ. ಹೂಳೆತ್ತಲು ಅನುದಾನ ನೀಡಲಿಲ್ಲ ಎಂದು ರೈತ ಸಂಘದ ಕೋಗಳಿ ಮಂಜುನಾಥ್ ತಿಳಿಸಿದರು.‌ಕೆರೆ ಭರ್ತಿಯಾದರೆ 3 ವರ್ಷಗಳ ಕಾಲ ಕೊಳವೆಬಾವಿ, ತೆರೆದ ಬಾವಿಗೆ ಜೀವ ಬರುತ್ತದೆ. ತೋಟದ ಬೆಳೆಗಾರರಿಗೆ ಅನುಕೂಲ. ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.
ಕೆರೆ ಅಭಿವೃದ್ಧಿ ಪಡಿಸಲು ಈ ಬಾರಿ ಅವಕಾಶ ಇತ್ತು. ಎಂಜಿನಿಯರ್‌ಗಳು ಸೂಕ್ತ ಮಾರ್ಗದರ್ಶನ ನೀಡಲಿಲ್ಲ ಎಂದು ಹಿರೆ ಹಾಲಿವಾಣದ ಶಿವಕ್ಳ ಆಂಜನೇಯ ಬೇಸರ ವ್ಯಕ್ತಪಡಿಸಿದರು.

 

Leave a Reply

Your email address will not be published. Required fields are marked *

error: Content is protected !!