ಉದಯವಾಹಿನಿ, ಬೆಂಗಳೂರು: ರಾಜ್ಯ ಸಚಿವ ಸಂಪುಟ ಪುನಾರಚನೆ, ವಾಲ್ಮೀಕಿ ನಿಗಮ ಮತ್ತು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣದ ಬಗ್ಗೆ ವರಿಷ್ಠರಿಗೆ ವಿವರಣೆ ನೀಡಿ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ಪ್ರಯಾಣ ಬೆಳೆಸಿದರು.ಇಂದು ಬೆಳಿಗ್ಗೆ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಸಿದ್ಧರಾಮಯ್ಯ ಇಬ್ಬರೂ ಒಟ್ಟಿಗೆ ದೆಹಲಿಗೆ ಪ್ರಯಾಣಿಸಿದರು.ದೆಹಲಿಯಲ್ಲಿಂದು ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಸೋನಿಯಾಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ರವರನ್ನು ಈ ಇಬ್ಬರು ನಾಯಕರು ಭೇಟಿಯಾಗಿ ಪಕ್ಷ ಹಾಗೂ ಸರ್ಕಾರದ ವಿಚಾರವಾಗಿ ಚರ್ಚೆ ನಡೆಸುವರು.ಈ ಹೈಕಮಾಂಡ್ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ , ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ವಾಲ್ಮೀಕಿ ಹಗರಣ ಮುಡಾ ಹಗರಣಗಳ ಬಗ್ಗೆ ಹೈಕಮಾಂಡ್‌ಗೆ ವಿವರ ನೀಡುವರು ಎಂದು ಹೇಳಲಾಗಿದೆ.ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ವಾಲ್ಮೀಕಿ ನಿಗಮದ ಅಕ್ರಮ ಹಾಗೂ ಮುಡಾ ಹಗರಣ ಇಟ್ಟುಕೊಂಡು ಪ್ರತಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬಿದ್ದಿದ್ದು, ಲೋಕಸಭಾ ಅಧಿವೇಶನದಲ್ಲೂ ಬಿಜೆಪಿ-ಜೆಡಿಎಸ್ ಸಂಸದರು ಈ ವಿಷಯವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರಿಗೂ ಮುಜುಗರ ತಂದಿದ್ದು, ಬೆಳವಣಿಗೆ ಹಿನ್ನೆಲೆಯಲ್ಲಿ ಈ ಹಗರಣಗಳ ಬಗ್ಗೆ ವರಿಷ್ಠರು ಮುಖ್ಯಮಂತ್ರಿಗಳಿಂದ ವಿವರಣೆ ಪಡೆಯವರು ಎಂದು ಹೇಳಲಾಗಿದೆ.
