ಉದಯವಾಹಿನಿ, ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರಿಗೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಮತ್ತಷ್ಟು ಮಹತ್ವಪೂರ್ಣ ದಾಖಲೆ ಒದಗಿಸಿಕೊಟ್ಟಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ವರ್ಗದವರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿರುವ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ರಮೇಶ್ ಅವರು ಈ ಹಿಂದೆ ಲೋಕಾಯುಕ್ತಕ್ಕೆ 400 ಪುಟಗಳ ದಾಖಲೆ ನೀಡಿ ಹಗರಣದ ತನಿಖೆ ನಡೆಸುವಂತೆ ದೂರು ನೀಡಿದ್ದರು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದ 25 ಪುಟಗಳ ಮತ್ತಷ್ಟು ಮಹತ್ವಪೂರ್ಣ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ನೀಡಿರುವುದಾಗಿ ಎನ್.ಆರ್.ರಮೇಶ್ ತಿಳಿಸಿದ್ದಾರೆ.1997-98 ರ ಅವಧಿಯಲ್ಲಿ ಅಭಿವದ್ಧಿ ಪಡಿಸಿ – ಡಾಂಬರೀಕರಣಗೊಂಡ ರಸ್ತೆಗಳು, ಪಾದಚಾರಿ ಮಾರ್ಗಗಳು, ಚರಂಡಿಗಳು, ಕುಡಿಯುವ ನೀರಿನ ಕೊಳವೆಗಳು, ಒಳಚರಂಡಿ ಕೊಳವೆಗಳು ಮತ್ತು ಬೀದಿ ದೀಪಗಳನ್ನು ಒಳಗೊಂಡ ದೇವನೂರು 3ನೇ ಹಂತದ ಬಡಾವಣೆಯಲ್ಲಿನ ನಿವೇಶನಗಳನ್ನು ಅರ್ಜಿದಾರರಿಗೆ ಹಂಚಿಕೆ ಮಾಡಲಾಗಿತ್ತು ಹಾಗೂ ಮೂರ್ನಾಲ್ಕು ವರ್ಷಗಳಲ್ಲಿಯೇ ಸದರಿ ಬಡಾವಣೆಯಲ್ಲಿ ಹತ್ತಾರು ಕಟ್ಟಡಗಳು ತಲೆ ಎತ್ತಿದ್ದವು.
