ಉದಯವಾಹಿನಿ, ನವದೆಹಲಿ: ಕರ್ನಾಟಕ ಸರ್ಕಾರ ಅನ್ನ ಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರ ಅಕ್ಕಿಯನ್ನು ಕೊಡಲು ಸಿದ್ಧವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಹಿತಿ ನೀಡಿದ್ದಾರೆ.ಈ ಕುರಿತು ನವದೆಹಲಿ ಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸಿದ್ಧವಿದೆ. ಮನವಿ ಬಂದರೆ ಹೆಚ್ಚುವರಿ ಅಕ್ಕಿ ಕೊಡಲಿದ್ದೇವೆ. ಕೆಜಿಗೆ 28 ರೂ.ನಂತೆ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ.ಎಷ್ಟು ಬೇಕಾದರೂ ಅಕ್ಕಿ ಕೊಡಲಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ, ಯಾವುದೇ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ಅಕ್ಕಿಯನ್ನು ಕೇಳಿದರೆ ಕೇಂದ್ರ ಸರ್ಕಾರವು ಅಕ್ಕಿಯನ್ನು ಕೊಡಲಿ ಸಿದ್ಧವಿದೆ. ಇನ್ನು ಕಳೆದ ವರ್ಷ ಕರ್ನಾಟಕ ಸರ್ಕಾರ ಅಕ್ಕಿಯನ್ನು ಕೇಳಿದಾಗ ದೇಶದಾದ್ಯಂತ ಬರಗಾಲದ ಪರಿಸ್ಥಿತಿ ಇತ್ತು.
ಹೀಗಾಗಿ, ಕರ್ನಾಟಕದ ಮಾದರಿಯಲ್ಲಿಯೇ ಎಲ್ಲಾ ರಾಜ್ಯಗಳು ಅಕ್ಕಿಯನ್ನು ಕೇಳಿದರೆ ಸ್ಟಾಕ್ ಸಮಸ್ಯೆ ಆಗಬಹುದು ಎಂದು ಅಕ್ಕಿಯನ್ನು ಕೊಡದಿರಲು ತೀರ್ಮಾನ ಮಾಡಲಾಗಿತ್ತು ಎಂದು ಕೇಂದ್ರದ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡರು.ಆದರೆ, ಈಗ ದೇಶದಲ್ಲಿ ಉತ್ತಮ ಮಳೆಯಾಗಿದ್ದು, ಎಲ್ಲೆಡೆ ಉತ್ತಮ ಬೆಳೆಯನ್ನು ನಿರೀಕ್ಷೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜ್ಯಗಳು ಅಕ್ಕಿಯನ್ನು ಕೇಳಿದರೆ 28 ರುಪಾಯಿ ದರದಲ್ಲಿ ನಾವು ಅಕ್ಕಿ ಕೊಡಲು ಸಿದ್ಧರಿದ್ದೇವೆ. ಈಗ ಸದಸ್ಯಕ್ಕೆ ಯಾವುದೇ ರಾಜ್ಯದಿಂದ ಅಕ್ಕಿ ಬೇಕೆಂದು ಮನವಿ ಬಂದಿಲ್ಲ. ದೇಶದಲ್ಲಿ ನಾವು 80 ಕೋಟಿ ಜನರಿಗೆ ಪಡಿತರ ಮೂಲಕ ಅಕ್ಕಿ ಕೊಡ್ತಿವಿ. ರಾಜ್ಯಗಳು ಹರಾಜಿಗೂ ಭಾಗಿಯಾಗದೇ ನೇರವಾಗಿ 28 ರೂ. ಕೊಡ್ತಿವಿ. ರಾಜ್ಯದಿಂದ ಈತನಕ ಯಾವುದೇ ಬೇಡಿಕೆ ಬಂದಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯಕ್ಕೆ ಅಕ್ಕಿ ಕೊಡಲು ಕೇಂದ್ರ ಸುತರಾಂ ಒಪ್ಪಿರಲಿಲ್ಲ. ಇರುವ ಸ್ಟಾಕ್ನ್ನೆಲ್ಲ ರಾಜ್ಯಕ್ಕೆ ಮಾರಾಟ ಮಾಡಿ ಖಾಲಿ ಮಾಡಿದರೆ ತುರ್ತು ಸಂದರ್ಭಗಳಲ್ಲಿ ವಿತರಣೆ ಮಾಡಲು ಕಷ್ಟ ಎಂಬುದು ಕೇಂದ್ರದ ವಾದವಾಗಿತ್ತು.ಅಕ್ಕಿ ನೀಡುವಂತೆ ಕರ್ನಾಟಕ ಸರ್ಕಾರ ಹಲವು ಬಾರಿ ಕೇಂದ್ರಕ್ಕೆ ಮನವಿ ಮಾಡಿತ್ತು. ರಾಜ್ಯದಿಂದ ಸಚಿವ ಕೆ.ಹೆಚ್.ಮುನಿಯಪ್ಪ ಖುದ್ದು ದೆಹಲಿಗೆ ಬೇಟಿ ಮಾಡಿ ಕೇಂದ್ರ ಸಚಿವರ ಜತೆ ಮಾತುಕತೆಯನ್ನೂ ನಡೆಸಿದ್ದರು. ಆದರೆ, ಪ್ರಯೋಜನವಾಗಿರಲಿಲ್ಲ.
