ಉದಯವಾಹಿನಿ, ಬೆಂಗಳೂರು: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದಲ್ಲಿ ನಿಯಮ ಬಾಹಿರವಾಗಿ ನಿವೇಶನ ಪಡೆದ ಆರೋಪದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಜಂಟಿಯಾಗಿ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ನಾಳೆಯಿಂದ ಆರಂಭವಾಗಲಿದೆ.ನಾಳೆ ಬೆಳಗ್ಗೆ 8 ಗಂಟೆಗೆ ಕೆಂಗೇರಿ ಸಮೀಪದ ಮೈಸೂರು ರಸ್ತೆಯ ಕೆಂಪಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಗುತ್ತದೆ.
ಒಟ್ಟು ಏಳು ದಿನಗಳ ಕಾಲ ಅಂದರೆ ಆ.8ರವರೆಗೆ ಮೈಸೂರುವರೆಗೆ ಪಾದಯಾತ್ರೆ ಸಾಗಲಿದ್ದು, ಆ.10ರಂದು ಸಮಾರೋಪ ಸಮಾರಂಭ ನಡೆಯಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಪ್ರಾರಂಭವಾಗಲಿರುವ ಪಾದಯಾತ್ರೆಯಲ್ಲಿ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಪ್ರಮುಖರಾದ ಆರ್.ಅಶೋಕ್, ಸುರೇಶ್ ಬಾಬು, ಛಲವಾದಿ ನಾರಾಯಣಸ್ವಾಮಿ, ಸಾ.ರಾ.ಮಹೇಶ್, ಬಂಡೆಪ್ಪ ಕಾಶ್ಯಂಪುರ್, ಅಶ್ವಥ್ ನಾರಾಯಣ, ಡಿ.ವಿ.ಸದಾನಂದಗೌಡ ಸೇರಿದಂತೆ ಎರಡು ಪಕ್ಷಗಳ ಪ್ರಮುಖರು ಭಾಗಿಯಾಗಲಿದ್ದಾರೆ.
ಮೊದಲ ದಿನ 16 ಕಿ.ಮೀ ಪಾದಯಾತ್ರೆ ಜರುಗಿದರೆ, 2ನೇ ದಿನ 22 ಕಿ.ಮೀ, ಎರಡನೇ ದಿನ 22 ಕಿ.ಮೀ, ಮೂರನೇ ದಿನ 20, 4ನೇ ದಿನ 20, ಐದನೇ ದಿನ 16, ಆರನೇ ದಿನ 17 ಹಾಗೂ ಕೊನೆಯ ದಿನದ 7 ಕಿ.ಮೀ ಪಾದಯಾತ್ರೆ ಸಾಗುವುದೊಂದಿಗೆಎ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯವಾಗಲಿದೆ.
8 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಿ ಬಿಡದಿಯಲ್ಲಿ ಮಧ್ಯಾಹ್ನ 1 ಗಂಟೆಗೆ ವೆಂಟೇಶ್ವರ ದೇವಸ್ಥಾನದಲ್ಲಿ ಭೋಜನ ಸ್ವೀಕರಿಸಿ ರಾತ್ರಿ 8 ಗಂಟೆಗೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಮಾಯಗಾನಹಳ್ಳಿಯಿಂದ ಯಾತ್ರೆ ಪ್ರಾರಂಭವಾಗಿ ರಾಮನಗರದ ಪದಾವತಿ ದೇವಸ್ಥಾನದಲ್ಲಿ ಭೋಜ ಸ್ವೀಕರಿಸಿ ನಂತರ ಸಂಜೆ 4.30ಕ್ಕೆ ಸಾರ್ವಜನಿಕ ಸಭೆ ನಡೆಯಲಿದೆ. ಕೆಂಗಲ್‌ನ ಕೆವಿಕೆ ಕನ್ವೆಷನ್ ಹಾಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
