ಉದಯವಾಹಿನಿ, ಬೆಂಗಳೂರು : ನಾನು ಸಿನಿಮಾ ವಿತರಕ ಆಗಿದ್ದಾಗ ಭೂಮಿ ಖರೀದಿಸಿದೆ. ಯಾರಿಗೂ ಮೋಸ ಮಾಡಲಿಲ್ಲ. ನಾನು ವಂಚನೆ ಮಾಡಿ ಭೂಮಿ ಖರೀದಿಸಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಜೆಡಿಎಸ್‌‍ ರಾಜಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದ್ದಾರೆ.
ಬಿಡದಿಯಲ್ಲಿ ಎರಡನೇ ದಿನದ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕೇತಗಾನಹಳ್ಳಿಯಲ್ಲಿ ನಾನು ಚಲನಚಿತ್ರ ಪ್ರದರ್ಶಕನಾಗಿದ್ದಾಗ ಚುನಾವಣೆಗೆ ನಿಲ್ಲುವ 15 ವರ್ಷಗಳ ಮುಂಚೆಯೇ 45 ಎಕರೆ ಜಮೀನು ತೆಗೆದುಕೊಂಡಿದ್ದೇನೆ. ಇದನ್ನು ನಾನು ಎಲ್ಲೂ ಮುಚ್ಚಿಟ್ಟಿಲ್ಲ ಎಂದಿದ್ದಾರೆ.
ಆದರೆ, ದಲಿತರಿಗೆ ಸೇರಬೇಕಾದ 68 ಎಕರೆ ಜಮೀನು ಡಿಸಿಎಂ ಲಪಟಾಯಿಸಿದ್ದಾರೆ. ದಲಿತರಿಗೆ ಸಿಗಬೇಕಾದ ನಿವೇಶನಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಅಸಲಿ ಸೊಸೈಟಿ ನಕಲಿ ಮಾಡಿ ದಲಿತರ ಭೂಮಿ ಲಪಟಾಯಿಸಿದ್ದಾರೆ. ಇಂಥವರ ಬಳಿ ನಾನು ಹೇಳಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.ಹೆಣ್ಣು ಮಗಳೊಬ್ಬಳನ್ನು ಕಿಡ್ನಾಪ್‌ ಮಾಡಿ ಬೆದರಿಸಿ ಅವರಪ್ಪನಿಂದ ಸದಾಶಿವನಗರದಲ್ಲಿ ಸೈಟು ಬರೆಸಿಕೊಂಡಿದ್ದಾರೆ. ಅದೇನೋ ಬಿಚ್ಚಿಡುತ್ತೇನೆ ಅಂದ್ಯಲ್ಲಪ್ಪ, ಬಿಚ್ಚು ನೋಡೋಣ. ನಾನಿರೋದು ಬೀದಿಯಲ್ಲಿ, ನೀನಿರೋದು ಗಾಜಿನ ಮನೆಯಲ್ಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನು ಬಿಚ್ಚೋಕ್ಕೆ ಹೋದರೆ ನಿಮದು ಪುಟ ಗಟ್ಟಲೆ ಇದೆ.ಅಜ್ಜಯ್ಯನ ಬಗ್ಗೆ ಶಿವಕುಮಾರ್‌ ಗೆ ಭಕ್ತಿ, ಗೌರವವಿದ್ದರೆ ಪ್ರಾಮಾಣಿಕವಾಗಿ ಬೆಳೆದು ಬಂದರಾ ಎಂದು ಪ್ರಮಾಣ ಮಾಡಲಿ. ನಾನೂ ಪ್ರಮಾಣ ಮಾಡುತ್ತೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!