ಉದಯವಾಹಿನಿ, ಮಾಲೂರು: ಶ್ರಾವಣ ಮಾಸ ಸೋಮವಾರದಿಂದ (ಆಗಸ್ಟ್‌,5) ಆರಂಭವಾಗಲಿದೆ. ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಭಕ್ತರ ಆರೋಪ.ತಾಲ್ಲೂಕಿನ ಪ್ರಸಿದ್ಧ ಯಾತ್ರ ಸ್ಥಳವಾದ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇಗುಲ ಮುಜರಾಯಿ ಇಲಾಖೆಗೆ ಒಳಪಡುತ್ತದೆ.
ಶ್ರಾವಣ ಮಾಸದಲ್ಲಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯ ಕೊರತೆ ಎದುರಾಗಿದೆ.
ತಮಿಳುನಾಡು ಸೇರಿದಂತೆ ಬೆಂಗಳೂರು ಹಾಗೂ ಚಿಕ್ಕತಿರುಪತಿ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ದೇವರ ದರ್ಶನಕ್ಕೆ ಭೇಟಿ ಕೊಡುತ್ತಾರೆ. ದೇವಾಲಯ ಆವರಣ ಬಳಿ ಚರಂಡಿ ಸ್ವಚ್ಛತೆ ಇಲ್ಲದೆ ಗಿಡಗಂಟಿ ಬೆಳದು ಕೊಳಚೆ ನೀರು ಹರಿಯಲು ಅವಕಾಶ ಇಲ್ಲದೆ ನಿಂತಿರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ದೇವಾಲಯ ಆವರಣದಲ್ಲಿ ಸ್ವಚ್ಛತೆ ಇಲ್ಲದೆ ಕಸದ ರಾಶಿ ಭಕ್ತರನ್ನು ಸ್ವಾಗತಿಸುತ್ತದೆ.
ವೆಂಕಟೇಶ್ವರನಿಗೆ ಪ್ರಿಯವಾದ ಶ್ರಾವಣ ಮಾಸದಲ್ಲಿ ಭಕ್ತರು ಸಾಗರೋಪಾದಿಯಲ್ಲಿ ದೇವಾಲಯಕ್ಕೆ ಭೇಟಿ ಕೊಡುತ್ತಾರೆ. ದೇವಾಲಯ ಆವರಣದಲ್ಲಿ ಪಂಚಾಯಿತಿಯಿಂದ ನಿರ್ಮಾಣ ಮಾಡಿರುವ ಪುರುಷರ ಶೌಚಾಲಯದಲ್ಲಿ ನೀರಿನ ನಲ್ಲಿಗಳು ಹಾಳಾಗಿವೆ. ದೇವಾಲಯ ಆಡಳಿತ ಮಂಡಳಿ ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಹರಿಕೆ ಹೊತ್ತು ಮುಡಿ ಕೊಡುವ ಭಕ್ತರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಹಣ ನೀಡಿ ಬಕೆಟ್ ಲೆಕ್ಕದಲ್ಲಿ ಖರೀದಿಸಿ ಮಕ್ಕಳಿಗೆ ಸ್ನಾನ ಮಾಡಿಸುವ ಪರಿಸ್ಥಿತಿ ಇದೆ. ವೆಂಕಟರಮಣ ದೇವಾಲಯ ಆವರಣದಲ್ಲಿರುವ ಯಾತ್ರ ನಿವಾಸ ಕಟ್ಟಡ ಪೂರ್ಣಗೊಳ್ಳದೆ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

Leave a Reply

Your email address will not be published. Required fields are marked *

error: Content is protected !!