ಉದಯವಾಹಿನಿ, ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಬೊಜ್ಜು ಎಂದರೆ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಹೆಚ್ಚುವರಿ ದೇಹದ ತೂಕವಾಗಿದೆ. ಇದನ್ನು ಬಾಡಿ ಮಾಸ್ ಇಂಡೆಕ್ಸ್‌ನೊಂದಿಗೆ (ಬಿಎಂಐ) ಅಳೆಯಲಾಗುತ್ತದೆ. ಈ ಅಳತೆ ಶೇ.95ಕ್ಕಿಂತ ಅಧಿಕವಾಗಿದ್ದರೆ ಬೊಜ್ಜು ಎಂದೂ, ಶೇ.85ಕ್ಕಿಂತ ಹೆಚ್ಚಿದ್ದರೆ ಅಧಿಕ ತೂಕ ಎಂದು ಪರಿಗಣಿಸಲಾಗುತ್ತದೆ. ಕಳೆದ ಎರಡು ದಶಕಗಳಲ್ಲಿ ಚಿಕ್ಕ ವಯಸ್ಸಿನವರಲ್ಲಿ ಬೊಜ್ಜು ದ್ವಿಗುಣಗೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆ ಸಮೀಕ್ಷೆಯಂತೆ 2025ರಲ್ಲಿ ಹತ್ತು ಮಕ್ಕಳಲ್ಲಿ ಒಬ್ಬರು ಅಥವಾ ಜಾಗತಿಕವಾಗಿ 188 ಮಿಲಿಯನ್ ಮಕ್ಕಳು ಬೊಜ್ಜು ಹೊಂದಿದ್ದಾರೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಮಕ್ಕಳಲ್ಲಿ ಬೊಜ್ಜು ಗಣನೀಯವಾಗಿ ಏರಿಕೆಯಾಗುತ್ತಿದೆ. ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಪ್ರಮಾಣ 2005-2006ರಲ್ಲಿ ಶೇ1.5 ರಷ್ಟಿತ್ತು. ಅದು 2019-21ರಲ್ಲಿ ಶೇ 3.4ಕ್ಕೆ ಏರಿಕೆಯಾಗಿದೆ.
ಬೊಜ್ಜಿಗೆ ಪ್ರಮುಖ ಕಾರಣಗಳು
ಶಕ್ತಿಯ ಅಸಮತೋಲನ: ಕ್ಯಾಲೋರಿ ಸೇವನೆ ಅಧಿಕವಾಗಿದ್ದು, ಆ ಕ್ಯಾಲೋರಿಯನ್ನು ವ್ಯಹಿಸಲು ದೈಹಿಕ ಚಟುವಟಿಕೆಗಳು ಇಲ್ಲದಿರುವುದರಿಂದ, ಇದು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತದೆ. ಇದರಿಂದ ದೇಹ ಹಿಗ್ಗುವುದು ಮತ್ತು ಹೊಸ ಕೊಬ್ಬಿನ ಕೋಶ ರಚನೆಯಾಗುತ್ತವೆ.
ಹಾರ್ಮೋನುಗಳ ಅಸಮತೋಲನ: ವಿಸ್ತರಿಸಿದ ಕೊಬ್ಬಿನ ಕೋಶಗಳು ಲೆಪ್ಟಿನ್ ಕಿಣ್ವ, ಇನ್ಸುಲಿನ್, ಗ್ರೆಲಿನ್ ಹಾಗೂ ಕಾರ್ಟಿಸೋಲ್ ಅನ್ನು ಬಿಡುಗಡೆ ಮಾಡುತ್ತವೆ.
ಲೆಪ್ಟಿನ್ ಹಸಿವನ್ನು ಹೆಚ್ಚಿಸುತ್ತದೆ: ಇನ್ಸುಲಿನ್ ಪ್ರತಿರೋಧವು ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ. ಗ್ರೆಲಿನ್ ನಿರಂತರ ಹಸಿವನ್ನು ಉಂಟುಮಾಡುತ್ತದೆ. ಕಾರ್ಟಿಸೋಲ್ ಮಟ್ಟ ಹೆಚ್ಚಾಗಿ ಕೊಬ್ಬಿನ ಶೇಖರಣೆಗೆ ಕಾರಣವಾಗುತ್ತದೆ.
ದೀರ್ಘಕಾಲದ ಉರಿಯೂತ: ಕರುಳಿನ ವಿಷಗಳೊಂದಿಗೆ ವಿಸ್ತರಿಸಿದ ಕೊಬ್ಬಿನ ಕೋಶಗಳು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ. ಇದು ಈ ಪ್ರತಿರಕ್ಷಣಾ ಕೋಶಗಳನ್ನು ಕೊಬ್ಬಿನ ಅಂಗಾಂಶಕ್ಕೆ ಆಕರ್ಷಿಸುತ್ತದೆ. ಪ್ರತಿರಕ್ಷಣಾ ಕೋಶಗಳು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಹೆಚ್ಚಿನ ಕೊಬ್ಬಿನಾಂಶ ಶೇಖರಣೆಯನ್ನು ಉತ್ತೇಜಿಸುತ್ತವೆ.
