ಉದಯವಾಹಿನಿ, ಸಾಮಾನ್ಯವಾಗಿ ಕಾಯಿಲೆಗಳಿಂದ ಬಹುಬೇಗನೆ ಚೇತರಿಸಿಕೊಳ್ಳಲು ರೋಗನಿರೋಧಕ ಶಕ್ತಿ ಸಹಾಯ ಮಾಡುತ್ತದೆ. ಒಂದು ವೇಳೆ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇದ್ದರೆ ಆಗಾಗ ಆನಾರೋಗ್ಯಕ್ಕೆ ತುತ್ತಾಗುವುದು ಮತ್ತು ಬೇಗನೆ ಚೇತರಿಕೆ ಕಾಣದಿರುವುದನ್ನು ಗಮನಿಸಬಹುದು. ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದ ರೋಗನಿರೋಧಕ ಶಕ್ತಿ ಇರುತ್ತದೆ ಎಂದು ಪೋಷಣಾ ತಜ್ಞರು ಹೇಳುತ್ತಾರೆ. ಹಾಗಾದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಋತುಮಾನಕ್ಕೆ ಅನುಗುಣವಾಗಿ ಸೇವಿಸಬೇಕಾದ ಹಣ್ಣುಗಳು ಯಾವುವು ಎಂಬ ಪಟ್ಟಿ ಇಲ್ಲಿದೆ.
ದೇಹದಲ್ಲಿ ಬಿಳಿ ರಕ್ತಕಣಗಳು ರೋಗನಿರೋಧಕ ಶಕ್ತಿಯ ಸೈನಿಕರಾಗಿರುತ್ತಾರೆ. ಹಾಗಾಗಿ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳ ಸೇವನೆ ಬಹಳ ಮುಖ್ಯ. ಇದು ದೇಹದ ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಪ್ರಮುಖವಾಗಿ ಕಿತ್ತಳೆ, ನಿಂಬೆ, ನೇರಳೆ, ಕಿವಿ ಹಣ್ಣು, ನೆಲ್ಲಿಕಾಯಿ, ಚಕೋತ ಹಾಗೂ ಮೂಸಂಬಿ ಹಣ್ಣುಗಳನ್ನು ಸೇವಿಸಬೇಕು. ಇವುಗಳಲ್ಲಿರುವ ಸಿಟ್ರಿಕ್ ಆಮ್ಲ ರೋಗನಿರೋಧಕ ಶಕ್ತಿಯನ್ನು ಕ್ರಮೇಣವಾಗಿ ಹೆಚ್ಚಿಸುತ್ತದೆ. ಇದರ ಜೊತೆಗೆ ಜೀರ್ಣಕ್ರಿಯೆ ಹಾಗೂ ಯಕೃತ್ತಿನ ಆರೋಗ್ಯಕ್ಕೂ ಸಹಕಾರಿಯಾಗಿದೆ.
ಕರುಳಿಗೂ ರೋಗನಿರೋಧಕ ಶಕ್ತಿಗೂ ಸಂಬಂಧವಿದೆ. ಕರುಳು ಆರೋಗ್ಯವಾಗಿದ್ದರೆ ರೋಗನಿರೋಧಕ ಶಕ್ತಿ ಚುರುಕಾಗಿರುತ್ತದೆ. ಪಪ್ಪಾಯಿ, ದಾಳಿಂಬೆ, ಸೇಬು, ಸ್ಟ್ರಾಬೆರಿ, ಬ್ಲೂಬೆರಿ ಮತ್ತು ರಾಸ್ಟ್‌ಬೆರಿಯಂತಹ ಬೆರಿಹಣ್ಣುಗಳ ಸೇವನೆಯಿಂದ ಕರುಳಿನಲ್ಲಿರುವ ಬ್ಯಾಕ್ಟಿರಿಯಾಗಳು ನಾಶವಾಗುತ್ತದೆ.
ಹಾಗಾಗಿ ಕಾಲಕ್ಕೆ ತಕ್ಕಂತೆ ಹಣ್ಣುಗಳನ್ನು ಸೇವನೆ ಮಾಡುವುದು ಆರೋಗ್ಯಕರವಾಗಿದೆ.
