ಉದಯವಾಹಿನಿ, ಮದ್ದೂರು : ‘ವಿಜಯೇಂದ್ರ, ಅಶೋಕ್‌, ಕುಮಾರಸ್ವಾಮಿ ಅವರೇ ಸುಮ್ಮನೆ ಪಾದಯಾತ್ರೆ ಮಾಡುವುದಲ್ಲ, ನಮ್ಮ ಪ್ರಶ್ನೆಗಳಿಗೆ ಉತ್ತರಕೊಟ್ಟು ಹೆಜ್ಜೆ ಹಾಕಿ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ನಿಮ್ಮ ಹಣೆಯಲ್ಲಿ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿ ಮುಖ್ಯಮಂತ್ರಿಯಾಗಿರುವುದನ್ನು ನಿಮಗೆ ಸಹಿಸಲು ಆಗುತ್ತಿಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಸೋಮವಾರ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ‘ಜನಾಂದೋಲನ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿ, ಭಾಷಣದುದ್ದಕ್ಕೂ ಬಿಜೆಪಿ ಮತ್ತು ಜೆಡಿಎಸ್‌ ನಾಯಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅದರಲ್ಲೂ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.10 ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ತೆಗೆಯುವುದಾಗಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್‌ ಸರ್ಕಾರ ಕಿತ್ತೊಗೆಯಲು ಬ್ರಿಟಿಷರ ಕೈಯಲ್ಲೇ ಆಗಲಿಲ್ಲ. ಇನ್ನು ಕುಮಾರಸ್ವಾಮಿ ಕೈಯಲ್ಲಿ ಆಗುತ್ತಾ? ಜನರ ಆಶೀರ್ವಾದದಿಂದ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದ್ದೇವೆ. ನಮ್ಮದು 10 ತಿಂಗಳ ಸರ್ಕಾರ ಅಲ್ಲ ಕುಮಾರಣ್ಣ, 10 ವರ್ಷಗಳ ಸರ್ಕಾರ ಎಂದು ತಿರುಗೇಟು ನೀಡಿದರು.

ಹೆದರುವ ಮಗ ನಾನಲ್ಲ: ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಯಾರು? ನೀವು ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡಿದ ನಂತರ ಏನಾಯಿತು? ಎಂಬುದನ್ನು ನೀವೇ ಚರ್ಚೆ ಮಾಡಿಕೊಳ್ಳಿ. ‘ಶಿವಕುಮಾರ್ ಅಪ್ಪ ಅಮ್ಮನಿಗೆ ಹುಟ್ಟಿಲ್ಲ’ ಎಂದು ಹೇಳಿದ್ದ ಕುಮಾರಸ್ವಾಮಿ ಸಾತನೂರಿಗೆ ಬಂದು ಕ್ಷಮೆ ಕೇಳಿದ್ದ. ಅಂದೇ ಯಾರಿಗೂ ಹೆದರದ ದೊಡ್ಡ ಆಲದಹಳ್ಳಿ ಕೆಂಪೇಗೌಡರ ಮಗನಾದ ನಾನು ಇಂದು ಹೆದರುತ್ತೇನೆಯೇ? ನಿಮ್ಮ ಪಾದಯಾತ್ರೆಗಳಿಗೆಲ್ಲ ಹೆದರುವ ಮಗ ನಾನಲ್ಲ’ ಎಂದು ತಿರುಗೇಟು ನೀಡಿದರು.

Leave a Reply

Your email address will not be published. Required fields are marked *

error: Content is protected !!