ಉದಯವಾಹಿನಿ, ಮುಂಡರಗಿ: ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಮುರಿದು ಈಗಾಗಲೇ ಜಲಾಶಯದಲ್ಲಿ ಸಂಗ್ರಹವಾಗಿದ್ದ ಸುಮಾರು 60 ಟಿಎಂಸಿ ನೀರು ಖಾಲಿಯಾಗಿದೆ. ಅಕಾಲದಲ್ಲಿ ಜಲಾಶಯದ ನೀರು ಖಾಲಿಯಾಗುತ್ತಿರುವುದು ತಾಲ್ಲೂಕಿನ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಹಲವು ದಿನಗಳಿಂದ ಹೊಸಪೇಟೆ ತುಂಗಭದ್ರಾ ಜಲಾಶಯದ ನೀರು ಶರವೇಗದಲ್ಲಿ ಖಾಲಿಯಾಗುತ್ತಿದ್ದು, ಮುಂಗಾರಿನ ಕೊನೆಯ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ತಮ್ಮ ಜಮೀನುಗಳಿಗೆ ತುಂಗಭದ್ರೆಯ ನೀರು ದೊರೆಯುತ್ತದೆಯೋ, ಇಲ್ಲವೊ ಎನ್ನುವ ಅನುಮಾನ ಇಲ್ಲಿಯ ರೈತರನ್ನು ಕಾಡತೊಡಗಿದೆ.
ಪ್ರತಿ ವರ್ಷ ತುಂಗಭದ್ರಾ ನದಿ ದಂಡೆಯ ಮೇಲಿರುವ ತಾಲ್ಲೂಕಿನ ಶಿಂಗಟಾಲೂರ, ಶೀರನಹಳ್ಳಿ, ಗಂಗಾಪುರ, ಕೊರ್ಲಹಳ್ಳಿ, ಕಕ್ಕೂರು, ಕಕ್ಕೂರುತಾಂಡಾ, ಹೆಸರೂರು ಮೊದಲಾದ ಗ್ರಾಮಗಳ ರೈತರು ತುಂಗಭದ್ರಾ ನದಿ ನೀರನ್ನು ನಂಬಿ ಧೈರ್ಯದಿಂದ ಭತ್ತ, ಕಬ್ಬು, ಸೂರ್ಯಕಾಂತಿ ಮೊದಲಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದರು.
ಸಾಮಾನ್ಯವಾಗಿ ಮಳೆಗಾಲದ ಜೂನ್, ಜುಲೈ, ಆಗಸ್ಟ್‌ನಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿರುತ್ತದೆ. ಆದರೆ ಈಗ ಹೊಸಪೇಟೆ ಜಲಾಶಯದ ಗೇಟ್ ಕೊಚ್ಚಿ ಹೋಗಿರುವುದರಿಂದ ನದಿಯ ನೀರು ವೇಗವಾಗಿ ಖಾಲಿಯಾಗುತ್ತಲಿದೆ. ಪ್ರಸ್ತುತ ಮುಂಗಾರಿನಲ್ಲಿ ಮಲೆನಾಡು, ಶಿವಮೊಗ್ಗ ಹಾಗೂ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಮಕಷ್ಟು ಮಳೆ ಸುರಿದದ್ದರಿಂದ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜ್ ಬೇಗನೆ ಭರ್ತಿಯಾಗಿತ್ತು.
ಆ.12ರಂದು 12,142 ಕ್ಯುಸೆಕ್, ಆ.13ರಂದು 20,447 ಕ್ಯುಸೆಕ್, ಆ.14ರಂದು 17,940 ಕ್ಯುಸೆಕ್ ಹಾಗೂ ಆ.15ರಂದು 17,551 ಕ್ಯುಸೆಕ್ ನೀರು ಬ್ಯಾರೇಜಿಗೆ ಹರಿದು ಬಂದಿದ್ದು, ನಿತ್ಯ ಅಷ್ಟೇ ಪ್ರಮಾಣದ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ.

 

Leave a Reply

Your email address will not be published. Required fields are marked *

error: Content is protected !!