ಉದಯವಾಹಿನಿ, ಯಾದಗಿರಿ: ಗಣೇಶ ಚತುರ್ಥಿಯು ಹತ್ತಿರವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆಗಳೂ ಜೋರಾಗುತ್ತಿವೆ. ಆದರೆ, ಮಣ್ಣಿನ ಗಣೇಶನಿಗೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಘ್ನವು ಕಾಡುತ್ತಿರುವುದು ವಿಪರ್ಯಾಸ.ಸೆಪ್ಟೆಂಬರ್ 7ರಂದು ಗಣೇಶ ಚತುರ್ಥಿ ಇದ್ದು, ಯಾದಗಿರಿ, ಗುರುಮಠಕಲ್, ಶಹಾಪುರ, ಸುರಪುರ ಸೇರಿದಂತೆ ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಬಗೆಯ ಪಿಒಪಿ ಗಣೇಶ ಮೂರ್ತಿಗಳು ಹೆಚ್ಚಿನ ಸಂಖ್ಯೆಯಲ್ಲಿ ತಯಾರಾಗುತ್ತಿವೆ.
ಪಿಒಪಿ ವಿಗ್ರಹಗಳನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಗಣೇಶ ಚತುರ್ಥಿ ಇನ್ನೆರಡು- ಮೂರು ದಿನಗಳು ಬಾಕಿ ಇರುವಾಗ ಸಭೆ ಕರೆಯುವ ಅಧಿಕಾರಿಗಳು ಪಿಒಪಿ ವಿಗ್ರಹ ಬಳಸದಂತೆ ‘ಕಟ್ಟುನಿಟ್ಟಿನ ಫಾರ್ಮಾನು’ ಹೊರಡಿಸಿ ಕೈತೊಳೆದುಕೊಂಡರೆ ಮತ್ತೆ ಮುಂದಿನ ವರ್ಷವೇ ಅವರಿಗೆ ‘ಕಟ್ಟುನಿಟ್ಟಿ’ನ ಮಾತು ಹೊರಡುವುದು ಎನ್ನುವುದು ಕೆಲ ಪರಿಸರ ಪ್ರೇಮಿಗಳ ವ್ಯಂಗ್ಯದ ನುಡಿ.ಈಗಾಗಲೇ ದೊಡ್ಡ ಪೆಂಡಾಲುಗಳನ್ನು ಹಾಕಿಕೊಂಡು ರಾಜಾರೋಷವಾಗಿಯೇ ಪಿಒಪಿ ವಿಗ್ರಹಗಳ ತಯಾರಿ ನಡೆದಿದೆ. ಆದರೆ, ಅದು ಸಂಬಂಧಿತರಿಗೆ ಕಾಣಿಸಿಲ್ಲ. ಇದೊಂದು ಜಾಣ ಕುರುಡು. ಪಿಒಪಿ ತಯಾರಿಕೆ ನಡೆಸುವುದು ಎಲ್ಲಿ? ಯಾರು ತಯಾರಿಸುತ್ತಾರೆ ಎನ್ನುವ ಮಾಹಿತಿ ಗೊತ್ತಿದ್ದರೂ ಕ್ರಮವಹಿಸುವಲ್ಲಿ ಮೀನಮೇಷ ಎಣಿಸುವುದಕ್ಕೆ ಏನೆನ್ನಬೇಕೋ ತಿಳಿಯದು ಎಂದು ಸಾರ್ವಜನಿಕರು ಹೇಳುವ ಮಾತಾಗಿದೆ.
ಕೆಲ ಅಧಿಕಾರಿಗಳು ನಮಗಿನ್ನೂ ಮೇಲಿನಿಂದ ಯಾವುದೇ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ. ಆದರೆ, ಪಿಒಪಿ ಬಳಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠ ಎಲ್ಲ ಬಗೆಯ ಪಿಒಪಿ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಿದೆ. ಇದು ವರ್ಷದ 365 ದಿನಕ್ಕೂ ಅನ್ವಯಿಸುತ್ತದೆ. ಮೇಲಿಂದ ಬರುವ ನಿರ್ದೇಶನಕ್ಕೆ ಕಾಯುವ ಜರೂರಿಲ್ಲ.
