ಉದಯವಾಹಿನಿ, ಹುಬ್ಬಳ್ಳಿ : ನಗರದಲ್ಲಿ ಮತ್ತೆ ಪೊಲೀಸರ ಪಿಸ್ತೂಲ್‌ ಸದ್ದು ಮಾಡಿದೆ. ತಡರಾತ್ರಿ ಗ್ಯಾಂಗ್‌ವಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಂಧನಕ್ಕೆ ತೆರಳಿದ ಪೊಲೀಸ್‌‍ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದ ರೌಡಿಶೀಟರ್‌ ಇನ್‌ಸ್ಪೆಕ್ಟರ್‌ ಹಾರಿಸಿದ ಗುಂಡೇಟು ತಗುಲಿ ಸಿಕ್ಕಿಬಿದ್ದಿದ್ದಾನೆ.
ರೌಡಿಶೀಟರ್‌ ಅಪ್ತಾಬ್‌ ಕರಡಿಗುಡ್ಡ ಪೊಲೀಸರಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಪಿ.ಕಳೆದ ರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗ್‌ವಾರ್‌ನಲ್ಲಿ ಜಾವೂರ್‌ ಎಂಬಾತ ಗಾಯಗೊಂಡಿದ್ದ. ಆತ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ದೂರು ಪಡೆದುಕೊಂಡು ಆರೋಪಿಗಳ ಬಂಧನಕ್ಕೆ ಕಸಬಾ ಠಾಣೆಯ ಪೊಲೀಸರು ಮುಂದಾಗಿದ್ದರು.
ಈ ವೇಳೆ ಬುಡರಸಿಂಗಿ ರಸ್ತೆಯಲ್ಲಿ ಆರೋಪಿ ಅಪ್ತಾಬ್‌ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಕ್ಷಣ ಅತನ ಬಂಧನಕ್ಕೆ ಇನ್ಸ್ ಪೆಕ್ಟರ್‌ ರಾಘವೇಂದ್ರ ಹಳ್ಳೂರು ತಂಡ ತೆರಳಿತ್ತು. ಆಗ ಆರೋಪಿ ಅಪ್ತಾಬ್‌ ಪೊಲೀಸ್‌‍ ಸಿಬ್ಬಂದಿಗಳಾದ ರಾಜು ರಾಠೋಡ್‌ ಮತ್ತು ಪಾಲಯ್ಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಮುಂದಾಗಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಇನ್‌್ಸಪೆಕ್ಟರ್‌ ರಾಘವೇಂದ್ರ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಪೊಲೀಸರ ಮಾತನ್ನು ಲೆಕ್ಕಿಸದೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಇನ್‌ಸ್ಪೆಕ್ಟರ್ ಹಾರಿಸಿದ ಗುಂಡು ಅಪ್ತಾಬ್‌ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಕಿಮ್ಸೌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಿಮ್ಸೌ ಆಸ್ಪತ್ರೆಗೆ ಹುಬ್ಬಳ್ಳಿ-ಧಾರವಾಡ ಕಮಿಷನರ್‌ ಎನ್‌.ಶಶಿಕುಮಾರ್‌ ಅವರು ಭೇಟಿ ನೀಡಿ ಕಾರ್ಯಾಚರಣೆ ವೇಳೆ ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಈ ಭಾಗದಲ್ಲಿ ಬಡ್ಡಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಮೀಟರ್‌ ಬಡ್ಡಿ ವಸೂಲಿ ಮಾಡಲು ವಿದ್ಯಾರ್ಥಿಗಳು ಹಾಗೂ ಅಪ್ರಾಪ್ತರನ್ನು ಬಳಸಿಕೊಳ್ಳಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ. ಯಾರು ಬಡ್ಡಿ ಕೊಡುತ್ತಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಶಶಿಕುಮಾರ್‌ ಅವರು ತಿಳಿಸಿದರು.

 

Leave a Reply

Your email address will not be published. Required fields are marked *

error: Content is protected !!