ಉದಯವಾಹಿನಿ , ಲಕ್ಷ್ಮೇಶ್ವರ: ತಾಲ್ಲೂಕಿನ ಲಕ್ಷ್ಮೇಶ್ವರ-ಹಾವೇರಿ, ಲಕ್ಷ್ಮೇಶ್ವರ-ಹುಬ್ಬಳ್ಳಿ ರಸ್ತೆಗಳನ್ನು ಹೊರತುಪಡಿಸಿದರೆ ಉಳಿದ ರಸ್ತೆಗಳೆಲ್ಲ ಕಿತ್ತು ಹಾಳಾಗಿವೆ. ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ರಸ್ತೆಗಳ ಸ್ಥಿತಿ ಅಯೋಮಯವಾಗಿವೆ.
ಲೋಕೋಪಯೋಗಿ, ಜಿಲ್ಲಾ ಪಂಚಾಯಿತಿ ಮತ್ತು ಪಿಎಂಜಿಎಸ್‍ವೈಆರ್‌ ಇಲಾಖೆಗಳಿಗೆ ಸೇರಿದ ಎಲ್ಲ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ.
ಹದಗೆಟ್ಟಿರುವ ಗ್ರಾಮೀಣ ರಸ್ತೆಗಳಿಂದಾಗಿ ರೈತರಿಗೆ ಹೊಲಗಳಿಗೆ ಹೋಗಿ ಬರುವುದು ಸಮಸ್ಯೆಯಾಗಿ ಕಾಡುತ್ತಿದೆ. ಕೆಲವು ಕಡೆ ಬೈಕ್‍ಗಳೂ ಹೋಗಲಾರದ ಮಟ್ಟಿಗೆ ರಸ್ತೆಗಳು ದುಃಸ್ಥಿತಿಗೆ ತಲುಪಿವೆ.ಹಿಂದೆ ನಿರ್ಮಿಸಿದ್ದ ರಸ್ತೆಗಳಲ್ಲಿ ಅಡಿಗಡಿಗೆ ಬೃಹತ್ ಆಕಾರದ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದಾಗಿ ವಾಹನಸವಾರರು ಪರದಾಡುವ ಪರಿಸ್ಥಿತಿ ಉದ್ಭವಿಸಿದೆ. ಗುಂಡಿ ಬಿದ್ದ ರಸ್ತೆಗಳು ಜನರ ಪ್ರಾಣಹರಣಕ್ಕೆ ಕಾಯುತ್ತಿವೆ.
ಒಟ್ಟು 495 ಕಿ.ಮೀ. ಉದ್ದದ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಟ್ಟಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 412 ಕಿ.ಮೀ. ರಸ್ತೆಗಳು ಬರುತ್ತವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಲಕ್ಷ್ಮೇಶ್ವರ-ಹುಬ್ಬಳ್ಳಿಗೆ ಸಂಪರ್ಕಿಸುವ ಮಂಗಸೂಳಿ ಮತ್ತು ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗಳು ಮತ್ತು ಲಕ್ಷ್ಮೇಶ್ವರ-ಹರದಗಟ್ಟಿ, ಲಕ್ಷ್ಮೇಶ್ವರ-ಶಿಗ್ಲಿ-ದೊಡ್ಡೂರು ರಸ್ತೆಗಳು ಇದ್ದುದರಲ್ಲಿ ಸ್ವಲ್ಪ ಉತ್ತಮ ಸ್ಥಿತಿಯಲ್ಲಿವೆ.
ಇನ್ನುಳಿದಂತೆ ಗೋವನಾಳ-ಶಿಗ್ಲಿ ಐದು ಕಿ.ಮೀ., ಲಕ್ಷ್ಮೇಶ್ವರ-ದೊಡ್ಡೂರು-ಸೂರಣಗಿ-ಬಾಲೆಹೊಸೂರು 20 ಕಿ.ಮೀ., ಸೂರಣಗಿ-ನೆಲೂಗಲ್ಲ 15 ಕಿ.ಮೀ., ಲಕ್ಷ್ಮೇಶ್ವರ-ಮಾಗಡಿ 8 ಕಿ.ಮೀ., ಲಕ್ಷ್ಮೇಶ್ವರ-ಮಾಗಡಿ-ಯಳವತ್ತಿ-ಯತ್ನಳ್ಳಿ-ಮಾಡಳ್ಳಿ 15 ಕಿ.ಮೀ. ಲಕ್ಷ್ಮೇಶ್ವರ-ಯತ್ನಳ್ಳಿ 12 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದು ಹಾಳಾಗಿ ವರ್ಷಗಳೇ ಕಳೆದಿವೆ. ಅದರಲ್ಲೂ ಸೂರಣಗಿ-ಬಾಲೆಹೊಸೂರು ಮುಖ್ಯ ರಸ್ತೆ ಗುಂಡಿಗಳಿಂದಾಗಿ ಹಳ್ಳದಂತೆ ಕಾಣುತ್ತಿದೆ. ಇದೇಸ್ಥಿತಿ ಗೋವನಾಳ-ಶಿಗ್ಲಿ ರಸ್ತೆಯದ್ದಾಗಿದೆ. ಈ ರಸ್ತೆ ಹಾಳಾಗಿಯೇ ನಾಲ್ಕೈದು ವರ್ಷಗಳೇ ಕಳೆದಿವೆ.
ಇನ್ನು ಶಿಗ್ಲಿ-ಹೂವಿನಶಿಗ್ಲಿ 6 ಕಿ.ಮೀ., ಶಿಗ್ಲಿ-ನಾಯಿಕೆರೂರ-ಉಳ್ಳಟ್ಟಿ 5 ಕಿ.ಮೀ., ಮುನಿಯನ ತಾಂಡಾ- ಉಂಡೇನಹಳ್ಳಿ 6 ಕಿ.ಮೀ., ಪುಟಗಾಂವ್‍ಬಡ್ನಿ-ಸೂರಣಗಿ 8 ಕಿ.ಮೀ., ಅಕ್ಕಿಗುಂದ-ಲಕ್ಷ್ಮೇಶ್ವರ 8 ಕಿ.ಮೀ., ಗುಲಗಂಜಿಕೊಪ್ಪ- ಮುಕ್ತಿಮಂದಿರ 4 ಕಿ.ಮೀ. ರಸ್ತೆಗಳಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದು ಹಾಳಾಗಿವೆ.

Leave a Reply

Your email address will not be published. Required fields are marked *

error: Content is protected !!