ಉದಯವಾಹಿನಿ,ಕೆಂಗೇರಿ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿದ, ಸಮಾಜದಲ್ಲಿ ಜಾತಿ ಮತ ಭೇದವನ್ನು ವಿರೋಧಿಸಿ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ಮಹಾನ್ ಚೇತನ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆ ಸರ್ವರಿಗೂ ಸಾರ್ವಕಾಲಿಕ ಅದರ್ಶವಾಗಿದೆ ಎಂದು ಕನಾಟಕ ಪ್ರದೇಶ ಆರ್ಯ ಈಡಿಗರ ಸಂಘ(ರಿ)ದ ಅಧ್ಯಕ್ಷ ಡಾ.ಎಂ.ತಿಮ್ಮೇಗೌಡ ಅಭಿಪ್ರಾಯಪಟ್ಟರು.
ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘ(ರಿ) ಅಡಿಯಲ್ಲಿ ಕೆಲಗೇರಿ ಹೋಬಳಿ ಆರ್ಯ ಈಡಿಗರ ಸಂಘ(ರಿ) ನೇತೃತ್ವದಲ್ಲಿ ಮರಿಯಪ್ಪನಪಾಳ್ಯದ ಜ್ಞಾನಭಾರತಿ ೨ನೇ ಹಂತದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೦ ಜಯಂತ್ಯೋತ್ಸವ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ್ಕಕೆ ಚಾಲನೆ ನೀಡಿ ಮಾತನಾಡಿದ ಅವರು ೨೫ಪಂಗಡಗಳು ಒಗ್ಗೂಡಬೇಕು. ಆಗ ಸರ್ಕಾರಗಳಿಂದ ಸಿಗುವ ಸವಲತ್ತು ಸಿಗುತ್ತವೆ ಎಂದರು.
ವೈಚಾರಿಕವಾಗಿ ನಾರಾಯಣ ಗುರುಗಳು ಬಹಳ ಎತ್ತರದ ಸ್ಥಾನದಲ್ಲಿದ್ದಾರೆ. ಅವರ ದೃಷ್ಟಿಯಲ್ಲಿ ಜಾತೀಯತೆ ಇಲ್ಲ. ಮನುಷ್ಯರೆಲ್ಲ ಒಂದೇ ಜಾತಿ ಎಂದು ಹೇಳಿದರೂ ವಾಸ್ತವದಲ್ಲಿ ಇದಕ್ಕಿಂತ ತೀರಾ ಭಿನ್ನವಾಗಿ ಆಚರಣೆಯಲ್ಲಿದ್ದ ಅಂಧಕಾರವನ್ನು ನೀಗಿಸುವ ಸಲುವಾಗಿ “ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು’ ಎನ್ನುವ ವಿಶ್ವ ಪ್ರಜ್ಞೆಯನ್ನು ಜಾಗೃತಗೊಳಿಸಿ ಮಾನವತೆಯ ರಾಯಭಾರಿಯಾದರು.
ಸಮಾಜದಲ್ಲಿ ಜಾತಿ ಭೇದವನ್ನು ವಿರೋಧಿಸಿ ಸಾಮಾಜಿಕ ಸಮಾನತೆಯನ್ನು ಪ್ರತಿಪಾದಿಸಿದ ನಾರಾಯಣ ಗುರುಗಳ ಚಿಂತನೆ ಎಲ್ಲರಿಗೂ ಸಾರ್ವಕಾಲಿಕ ಆದರ್ಶವಾಗಿದೆ. ಈಡಿಗರ ಸಂಘದ ಉಪಾಧ್ಯಕ್ಷೆ ಆಶಾ ಲೋಹಿತ್, ಕೇಂದ್ರ ಸಮಿತಿ ಸದಸ್ಯ ಕೃಷ್ಣಮೂರ್ತಿ, ನಿಟ್ಟೂರು ಸಂಸ್ಥಾನದ ಧರ್ಮದರ್ಶಿ ಅಂಬರೀಷ್, ಸಾಹಿತಿ ಸುಜಯಸುರೇಶ್, ಉಪಾಧ್ಯಕ್ಷರಾದ ಮಹಾಲಿಂಗಪ್ಪ, ವಿ.ಉಮೇಶ್ ಕೇಶವಮೂರ್ತಿ, ಜಗದೀಶ್, ಪ್ರಧಾನ ಕಾರ್ಯದರ್ಶಿ ಟಿ.ಎನ್.ಶಂಕರ್, ಬಿಜೆಪಿ ಮುಖಂಡ ಜಯರಾಮು ಉಪಸ್ಥಿತರಿದ್ದರು ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಟಿ.ಮುತ್ತುರಾಜ್ ವಹಿಸಿದ್ದರು.
