ಉದಯವಾಹಿನಿ, ಬೆಂಗಳೂರು: ಸಕ್ಕರೆ ಕಾರ್ಖಾನೆ ಕಾರ್ಯನಿರ್ವಹಣೆಗೆ ಅನುಮತಿ ನೀಡದೆ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್‌ ಬೆಂಗಳೂರಿನ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನಲ್ಲಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಸಕ್ಕರೆ ಕಾರ್ಖಾನೆಯಲ್ಲಿ ಎಥೆನಾಲ್‌ ಉತ್ಪಾದನೆಗೆ ಸಂಬಂಧಪಟ್ಟ ಪರವಾನಗಿ ನವೀಕರಣವಾಗಿಲ್ಲ ಎಂಬ ಕಾರಣಕ್ಕಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಖಾನೆಗೆ ಬೀಗ ಹಾಕಿತ್ತು. ಇದನ್ನು ಪ್ರಶ್ನಿಸಿ ಯತ್ನಾಳ್‌ ಹೈಕೋರ್ಟ್‌ ಮೊರೆ ಹೋಗಿದ್ದರು.
ಕಳೆದ 21 ರಂದು ಮುಖ್ಯ ನ್ಯಾಯಮೂರ್ತಿಗಳ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದು ಸಹಮತಿಯ ಮೇರೆಗೆ ಕಾರ್ಯಾಚರಣೆ ಪದ್ಧತಿಯಲ್ಲಿ ಕಾರ್ಖಾನೆ ಪುನರಾರಂಭಕ್ಕೆ ಅವಕಾಶ ಮಾಡಿಕೊಡುವಂತೆ ಆದೇಶಿಸಲಾಗಿದೆ.ಆದರೆ ನ್ಯಾಯಾಲಯದ ತೀರ್ಪಿನ ಪ್ರತಿ ತಮ ಕೈ ಸೇರಿಲ್ಲ ಎಂದು ನೆಪವೊಡ್ಡಿ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆರೋಪಿಸಿದ್ದರು.
15 ವರ್ಷಗಳ ಮೇಲೆ ಚಿಂಚೋಳಿಯಲ್ಲಿ ಕಾಂಗ್ರೆಸ್‌‍ ನಾಯಕ ಪಿ.ಚಿದಂಬರಂ ಸಕ್ಕರೆ ಕಾರ್ಖಾನೆ ತೆರೆಯಲು ಮುಂದಾಗಿದ್ದರು. ಅದು ದೊಡ್ಡ ಹಗರಣವಾಗಿ ಸಿಬಿಐ ತನಿಖೆಯೂ ಆಗಿತ್ತು. ಹಳೆಯ ಕಾರ್ಖಾನೆಯನ್ನು ಪುನರ್‌ ಆರಂಭಿಸಲು 11 ಸಲ ಟೆಂಡರ್‌ ಕರೆದರೂ ಯಾರೂ ಮುಂದೆ ಬಂದಿರಲಿಲ್ಲ.

ರೈತರ ಅನುಕೂಲಕ್ಕಾಗಿ ಹಾಗೂ 38 ಕೋಟಿ ರೂ. ಟೆಂಡರ್‌ ಒಪ್ಪಿಕೊಂಡು ಕಾರ್ಖಾನೆ ಆರಂಭಿಸಿದ್ದು, ಎಥೆನಾಲ್‌ ಉತ್ಪಾದನೆ ಮಾಡುತ್ತಿದ್ದೇನೆ ಎಂದು ವಿವರಿಸಿದರು.ಕಾಂಗ್ರೆಸ್‌‍ ಸರ್ಕಾರ ದ್ವೇಷದ ರಾಜಕಾರಣಕ್ಕಾಗಿ ಕಾರ್ಖಾನೆಗೆ ಬೀಗ ಹಾಕಿದೆ. ತಮಿಳುನಾಡಿನಲ್ಲಿ ಖಾಸಗಿ ಕಂಪನಿಯಲ್ಲಿ ನಿಯಮ ಉಲ್ಲಂಘಿಸಿದ್ದರೂ ಅವರಿಂದ ಕೋಟ್ಯಂತರ ರೂ. ಲಂಚ ಪಡೆದು ವ್ಯವಹಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ನಮಗೆ ಸತಾಯಿಸುತ್ತಿದ್ದಾರೆ. ಹಿಂದುಳಿದ ಜಿಲ್ಲೆಯಲ್ಲಿ ಕಾರ್ಖಾನೆ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದು, ರೈತರ ಕಬ್ಬು ಅರೆಯಲು ದುರುದ್ದೇಶಪೂರಕವಾಗಿ ಅಡ್ಡಿಪಡಿಸಲಾಗುತ್ತಿದೆ ಎಂದು ದೂರಿದರು.

Leave a Reply

Your email address will not be published. Required fields are marked *

error: Content is protected !!