ಉದಯವಾಹಿನಿ, ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಪರಿಗಣಿಸಿರುವ ನಟ ಚಿಕ್ಕಣ್ಣ ಅವರು ಇಂದು ತನಿಖಾಧಿಕಾರಿ ಮುಂದೆ 2ನೇ ಬಾರಿ ವಿಚಾರಣೆಗೆ ಹಾಜರಾದರು. ಬಸವೇಶ್ವರನಗರ ಠಾಣೆಯ ಕಟ್ಟಡದಲ್ಲಿರುವ ವಿಜಯನಗರದ ಎಸಿಪಿ ಚಂದನ್ ಅವರ ಕಛೇರಿಯಲ್ಲಿ ಇಂದು ಬೆಳಗ್ಗೆ ನಟ ಚಿಕ್ಕಣ್ಣ ಅವರು ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆಗೂ ಮುನ್ನ ಸ್ಟೋನಿಬ್ರೋಕ್ ರೆಸ್ಟೋರೆಂಟ್ನಲ್ಲಿ ಡಿ.ಗ್ಯಾಂಗ್ನೊಂದಿಗೆ ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದರು. ಹಾಗಾಗಿ ಚಿಕ್ಕಣ್ಣ ಅವರನ್ನು ವಿಚಾರಣೆಗೊಳಪಡಿಸಿ ತನಿಖಾಧಿಕಾರಿ ಮಾಹಿತಿ ಪಡೆದುಕೊಂಡು ಸಾಕ್ಷಿಯಾಗಿ ಪರಿಗಣಿಸಿದ್ದಾರೆ.

ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ದರ್ಶನ್ ಅವರನ್ನು ಚಿಕ್ಕಣ್ಣ ಭೇಟಿ ಮಾಡಿಬಂದಿದ್ದರು. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಚಿಕ್ಕಣ್ಣ ವಿಚಾರಣೆಗೆ ಹಾಜರಾದಾಗ ಜೈಲಿನಲ್ಲಿ ದರ್ಶನ್ನನ್ನು ಯಾವ ಉದ್ದೇಶದಿಂದ, ಯಾಕೆ ಭೇಟಿ ಮಾಡಿದ್ದೀರಿ? ಅದರ ಅವಶ್ಯಕತೆ ಏನಿತ್ತು..? ಎಂಬಿತ್ಯಾದಿ ಪ್ರಶ್ನೆಗಳನ್ನು ತನಿಖಾಧಿಕಾರಿ ಚಂದನ್ ಕೇಳಿ ಮಾಹಿತಿ ಪಡೆದುಕೊಂಡರು.
ವಿಚಾರಣೆ ನಂತರ ಠಾಣೆಯಿಂದ ಹೊರಬಂದ ಬಳಿಕ ತಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ನನ್ನನ್ನು ಸಾಕ್ಷಿಯಾಗಿ ಮಾಡಿದ್ದಾರೆ. ಪೊಲೀಸರ ಪ್ರಶ್ನೆಗೆ ಉತ್ತರಿಸಿದ್ದೇನೆ. ಹಾಗಾಗಿ ಹೆಚ್ಚಾಗಿ ಏನೂ ಹೇಳುವಂತಿಲ್ಲ. ನಿನ್ನೆ ನನಗೆ ನೋಟಿಸ್ ಬಂದಿತ್ತು. ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದೆ ಎಂದಷ್ಟೇ ಹೇಳಿ ತೆರಳಿದರು.

Leave a Reply

Your email address will not be published. Required fields are marked *

error: Content is protected !!