ಉದಯವಾಹಿನಿ, ಸೈದಾಪುರ: ಕಳೆದೊಂದು ವರ್ಷದಿಂದ ಕುಡಿಯುವ ಮತ್ತು ಮನೆ ಬಳಕೆ ನೀರಿಗಾಗಿ ಬದ್ದೇಪಲ್ಲಿ ತಾಂಡಾದ ಜನರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.ಸಮೀಪದ ಅಜಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬದ್ದೇಪಲ್ಲಿ ತಾಂಡಾದಲ್ಲಿ ಸುಮಾರು 1400ರಿಂದ 1600 ಜನಸಂಖ್ಯೆ ಇದೆ.
ಆದರೆ ಇಲ್ಲಿಯ ಜನ ಕುಡಿಯುವ ನೀರಿಗಾಗಿ ದೂರದ ಹೊಲಗದ್ದೆಗಳಲ್ಲಿನ ಬಾವಿ, ಕೈಪಂಪುಗಳ ಮೊರೆ ಹೋಗುವಂತಾಗಿದೆ. ಅಲ್ಲದೆ ಗುಣಮಟ್ಟದ ರಸ್ತೆ, ಬಸ್ ಸಂಚಾರ ಸೇರಿದಂತೆ ಮೂಲಸೌಕರ್ಯಗಳು ಮರೀಚಿಕೆಯಾಗಿವೆ.
ತಾಂಡಾದಲ್ಲಿ ಸುಮಾರು 3-4 ಕೈಪಂಪುಗಳಿವೆ. ಆದರೆ ಅಂತರ್ಜಲಮಟ್ಟ ಕುಸಿತದಿಂದ ಈ ಕೈಪಂಪುಗಳಿಂದ ಸಾಕಾಗುವಷ್ಟು ನೀರು ಬಾರದೆ, 25 ಸಾವಿರ ಲೀಟರ್ ನೀರು ಸಂಗ್ರಹ ಓವರ್‌ಹೆಡ್ ಟ್ಯಾಂಕ್ ನಿರುಪಯುಕ್ತವಾಗಿದೆ. ಇದರಿಂದ ಕುಡಿಯಲು ಮತ್ತು ಮನೆ ಬಳಕೆಗೆ ನಿತ್ಯ ಹೊಲಗದ್ದೆಗಳಲ್ಲಿರುವ ಕೊಳವೆ ಬಾವಿ, ಬಾವಿಗಳಿಂದ ಟ್ರ್ಯಾಕ್ಟರ್, ದ್ವಿಚಕ್ರವಾಹನಗಳಲ್ಲಿ ತೆಗೆದುಕೊಂಡು ಬರುವಂತಾಗಿದೆ. ವಾಹನ ಸೌಲಭ್ಯ ಹೊಂದಿರದವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸ್ಥಳೀಯರಾದ ಹಣಮಂತ ಪವಾರ್ ಅಳಲು ತೋಡಿಕೊಂಡರು.

ಶಾಲಾ ಮಕ್ಕಳು ತಟ್ಟೆ ತೊಳೆಯಲು ಮನೆಗೆ ಹೋಗಬೇಕು: ‘ತಾಂಡಾದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಸುಮಾರು 120 ಮಕ್ಕಳಲ್ಲಿ ಬಹುತೇಕರು ಮಧ್ಯಾಹ್ನದ ಬಿಸಿಯೂಟ ಮಾಡಿದ ನಂತರ ಕೈ, ತಟ್ಟೆ ತೊಳೆಯಲು ಹಾಗೂ ಕುಡಿಯಲು ಮನೆಗೆ ಹೋಗಬೇಕಾಗಿದೆ’ ಎಂದು ಎಸ್‍ಡಿಎಂಸಿ ಅಧ್ಯಕ್ಷ ವೆಂಕಟೇಶ ಅವರು ತಿಳಿಸಿದರು. ಸಮಸ್ಯೆ ಆಲಿಸದ ಜನಪ್ರತಿನಿಧಿಗಳು: ‘ಕಳೆದ 2-3 ವರ್ಷಗಳಿಂದ ನೀರಿನ ಸಮಸ್ಯೆಯಿಂದ ತಾಂಡಾದ ಜನರು ಪರಿತಪಿಸುತ್ತಿದ್ದಾರೆ. ಸಂಬಂಧಿಸಿದ ಶಾಸಕರ, ಜನಪ್ರತಿನಿಧಿಗಳ ಗಮನಕ್ಕೂ ತಂದರೂ ಯಾವುದೇ ಶಾಶ್ವತ ಪರಿಹಾರ ನೀಡದೆ ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಮಾತ್ರ ತಾಂಡಾದ ಮತಗಳು ಬೇಕು. ಆದರೆ ಗೆದ್ದ ಬಳಿಕ ಮತದಾರರ ಸಮಸ್ಯೆಗೆ ಸ್ಪಂದನೆ ನೀಡದಿರುವ ಜನಪ್ರತಿನಿಧಿಗಳು ಇದ್ದರೆಷ್ಟು ಬಿಟ್ಟರೆಷ್ಟು’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!