ಉದಯವಾಹಿನಿ, ಬೆಂಗಳೂರು: ಗಣೇಶ ಪರಿಸರ ಮತ್ತು ಪ್ರಕೃತಿಯಿಂದಲೇ ಹುಟ್ಟಿದ ದೇವರಾಗಿದ್ದು, ಗಣಪತಿಯ ಪೂಜಿಸುವ ನಾವು ಪ್ರಕೃತಿ, ಪರಿಸರವನ್ನೂ ಉಳಿಸಬೇಕು, ಈ ಬಾರಿ ಬಣ್ಣ ರಹಿತ ಮಣ್ಣಿನ ವಿನಾಯಕ ಮೂರ್ತಿಯನ್ನು ಮಾತ್ರ ಪೂಜಿಸಿ ಎಂದು ಅರಣ್ಯ, ಜೀವಿಶಾಸ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಾಡಿನ ಜನತೆಗೆ ಮನವಿ ಮಾಡಿದ್ದಾರೆ.
ಈ ವರ್ಷ ದೇಶಾದ್ಯಂತ ಸುರಿದ ಧಾರಾಕಾರ ಮಳೆಯಿಂದ ಹಲವು ಕಡೆ ಭೂ ಕುಸಿತ ಉಂಟಾಗಿ ಅನಾಹುತಗಳು ಸಂಭವಿಸಿವೆ. ಹೀಗಾಗಿ ಪ್ರಕೃತಿ ಪರಿಸರ ಸಂರಕ್ಷಣೆಯ ಹೊಣೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ಈ ಬಾರಿಯ ಗಣೇಶೋತ್ಸವವನ್ನು ಪರಿಸರ ಸ್ನೇಹಿ ಮಾಡೋಣ. ಪ್ರಕೃತಿ ವಿಕೋಪ ನಿವಾರಕ ನಮ ಪರಿಸರ ವಿನಾಯಕನನ್ನು – ಬಣ್ಣ ರಹಿತ ಮಣ್ಣಿನ ಮೂರ್ತಿಗಳ ರೂಪದಲ್ಲಿ ಪೂಜಿಸೋಣ ಎಂದು ಅವರು ಸಂದೇಶ ನೀಡಿದ್ದಾರೆ.
ಜಲಚರಗಳ ಸಾವಿಗೆ ಕಾರಣವಾಗುವ, ಜಲ ಮೂಲಗಳನ್ನು ಕಲುಷಿತಗೊಳಿಸುವ ರಾಸಾಯನಿಕ ಬಣ್ಣ ಲೇಪಿತ ಪಿಓಪಿ ಗಣೇಶ ಮೂರ್ತಿ ಪೂಜೆ ಮಾಡದೆ, ಸಣ್ಣ ಮಣ್ಣಿನ ಪರಿಸರ ಸ್ನೇಹಿ ಗಣಪನನ್ನೇ ತಂದು ಪೂಜಿಸಿ, ಮನೆಯಲ್ಲೇ ವಿಸರ್ಜಿಸಿ ಆ ನೀರನ್ನು ಮರ -ಗಿಡಗಳಿಗೆ ಹಾಕುತ್ತೇನೆ ಎಂದು ಸಂಕಲ್ಪ ಮಾಡೋಣ ಎಂದು ಅವರು ವಿನಂತಿಸಿದ್ದಾರೆ.
ಹಬ್ಬದ ಸಂಭ್ರಮದಲ್ಲಿ, ಗಣೇಶನ ಮೆರವಣಿಗೆಯ ವೇಳೆ ಹಸಿರು ಪಟಾಕಿಯನ್ನಷ್ಟೇ ಹಚ್ಚಬೇಕು. ಶಬ್ದ ಮಾಲಿನ್ಯ ಆಗದಂತೆ ಧ್ವನಿವರ್ಧಕ ಬಳಸಬೇಕು ಜೊತೆಗೆ ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ತಡೆಯಬೇಕು ಎಂದು ಅವರು ನಾಡಿನ ಜನತೆಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!