ಉದಯವಾಹಿನಿ, ಬೆಂಗಳೂರು: ಕ್ರಸ್ಟ್ ಗೇಟ್ವೊಂದರ ಚೈನ್ ಲಿಂಕ್ ತುಂಡಾಗಿ ಆತಂಕ ಉಂಟು ಮಾಡಿದ್ದ ತುಂಗಭದ್ರಾ ಜಲಾಶಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಆಶಾಭಾವನೆ ಮೂಡಿಸಿದೆ. ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಶೇ.92ರಷ್ಟು ನೀರು ಹರಿದುಬಂದಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, 105.79 ಟಿಎಂಸಿ ಅಡಿ ಗರಿಷ್ಠ ಸಾಮರ್ಥ್ಯವಿರುವ ಈ ಜಲಾಶಯದಲ್ಲಿ ಇಂದು 96.84 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. 40 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಒಳಹರಿವಿದ್ದು, 13 ಸಾವಿರ ಕ್ಯೂಸೆಕ್ಗೂ ಹೆಚ್ಚಿನ ಹೊರಹರಿವಿದೆ. ಶೇ.92ರಷ್ಟು ಭರ್ತಿಯಾಗಿದೆ.
1633 ಅಡಿ ಎತ್ತರದ ಈ ಜಲಾಶಯದಲ್ಲಿ ಈಗಾಗಲೇ 1630.73 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಒಳಹರಿವು ಸಾಕಷ್ಟು ಪ್ರಮಾಣದಲ್ಲಿದೆ. ಹೀಗಾಗಿ ಜಲಾಶಯ ಭರ್ತಿಯಾಗುವುದು ಬಹುತೇಕ ಖಚಿತವಾಗಿದೆ.ಜಲಾಶಯದಿಂದ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುವ ಮುನ್ಸೂಚನೆಯನ್ನು ತುಂಗಭದ್ರಾ ಮಂಡಳಿ ನೀಡಿದ್ದು, ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚನೆ ರವಾನಿಸಿದೆ.
ಜಲಾಶಯದ 19ನೇ ಕ್ರಸ್ಟ್ ಗೇಟ್ ಚೈನ್ ಲಿಂಕ್ ಮುರಿದು ಸುಮಾರು 35 ಸಾವಿರ ಟಿಎಂಸಿಗೂ ಅಧಿಕ ನೀರು ಹರಿದುಹೋಗಿತ್ತು. ಮತ್ತೆ ಜಲಾಶಯ ಭರ್ತಿಯಾಗುತ್ತೋ ಇಲ್ಲವೋ ಎಂಬ ಆತಂಕ ಮನೆ ಮಾಡಿತ್ತು.ಸರ್ಕಾರ ಮುರಿದು ಹೋಗಿದ್ದ ಗೇಟ್ ಅನ್ನು ಬದಲಿಸಿ ತುರ್ತಾಗಿ ಹೊಸ ಗೇಟ್ ಅಳವಡಿಸಿದ್ದರಿಂದ ಜಲಾಶಯದಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಏರಿಕೆಯಾಗುತ್ತಾ ಬಂದಿದೆ.
