ಉದಯವಾಹಿನಿ, ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಅಭಿಯೋಜನೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ನಿಲುವನ್ನು ಎತ್ತಿಹಿಡಿದಿರುವ ಕರ್ನಾಟಕ ಹೈಕೋರ್ಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಿಟ್ ಅರ್ಜಿಯನ್ನು ವಜಾಗೊಳಿಸಿದೆ.
ಸುದೀರ್ಘ ವಾದ, ಪ್ರತಿವಾದದ ಬಳಿಕ ಪ್ರಕರಣದ ತನಿಖೆಯ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಹೈಕೋರ್ಟ್‌ನ ಏಕ ಸದಸ್ಯ ಪೀಠದ ನ್ಯಾ. ನಾಗಪ್ರಸನ್ನ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಮತ್ತು ಭಾರತೀಯ ನ್ಯಾಯಸಂಹಿತೆ 218 ರಡಿ ರಾಜ್ಯಪಾಲರು ನೀಡಿದ್ದ ಅಭಿಯೋಜನೆ ಮತ್ತು ತನಿಖೆಯ ಪೂರ್ವಾನುಮತಿಯನ್ನು ಎತ್ತಿ ಹಿಡಿದಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 17ಎ ಅಡಿ ಪೊಲೀಸ್ ಅಧಿಕಾರಿಯೇ ಪೂರ್ವಾನುಮತಿಗೆ ಅರ್ಜಿ ಸಲ್ಲಿಸಬೇಕು ಎಂಬ ಕಡ್ಡಾಯ ನಿಯಮಗಳಿಲ್ಲ. ಖಾಸಗಿ ದೂರಿನ ಸಂದರ್ಭಗಳಲ್ಲಿ ಇದಕ್ಕೆ ವಿನಾಯಿತಿ ಇದೆ. ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರ ಬಳಸಿ ನಡೆಸಿರುವ ಪ್ರಕ್ರಿಯೆಗಳಲ್ಲಿ ದೋಷಗಳು ಕಂಡುಬಂದಿಲ್ಲ ಎಂದು ಪೀಠ ಹೇಳಿದೆ.ಸಂವಿಧಾನದ 163 ನೇ ವಿಧಿಯಡಿ ರಾಜ್ಯಪಾಲರು ಸಂಪುಟದ ಸಲಹೆ ಆಧಾರಿತವಾಗಿ ಕರ್ತವ್ಯ ನಿರ್ವಹಣೆ ಮಾಡಬೇಕು ಎಂದು ಹೇಳಲಾಗಿದೆ. ಆದರೆ ಕೆಲ ಸಂದರ್ಭಗಳಲ್ಲಿ ರಾಜ್ಯಪಾಲರು ಸ್ವಯಂ ವಿವೇಚನಾಧಿಕಾರವನ್ನು ಬಳಸಿಯೂ ನಿರ್ಧಾರ ತೆಗೆದುಕೊಳ್ಳಬಹುದು.
ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಗಳ ಕುಟುಂಬ ಫಲಾನುಭವಿಯಾಗಿರುವುದರಿಂದ ರಾಜ್ಯಪಾಲರು ಪೂರ್ವಾನುಮತಿ ನೀಡಲು ತೆಗೆದುಕೊಂಡಿರುವ ಕ್ರಮ ಸಮರ್ಥನೀಯವಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಿಲ್ಲ ಎಂಬ ವಾದವನ್ನು ತಳ್ಳಿಹಾಕಿದೆ. ಸಿದ್ದರಾಮಯ್ಯ ಅವರ ಪರ ವಕೀಲರು ತಮ ವಾದ ಮಂಡನೆಯ ಸಂದರ್ಭದಲ್ಲಿ ಎತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಹೈಕೋರ್ಟ್ ಉತ್ತರ ನೀಡಿದೆ.ಯಾವ ರೀತಿಯ ವಿಚಾರಣೆ ಎಂಬುದನ್ನು ಕೆಳಹಂತದ ನ್ಯಾಯಾಲಯ ನಿರ್ಧರಿಸಬಹುದಾಗಿದೆ. ಈವರೆಗೂ ರಾಜ್ಯಪಾಲರ ಅಭಿಯೋಜನೆ ಆಧರಿಸಿದ ಪ್ರಕ್ರಿಯೆಗಳಿಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವು ಮಾಡಿದೆ.
