ಉದಯವಾಹಿನಿ, ಹಾವೇರಿ: ಜಿಲ್ಲಾ ವ್ಯಾಪ್ತಿಯ ಕುಮಾರಪಟ್ಟಣದಿಂದ ತಡಸ ವೃತ್ತದವರೆಗೆ ರಾಷ್ಟ್ರೀಯ ಹೆದ್ದಾರಿ-48 (ಎನ್‌ಎಚ್) ಹಾದು ಹೋಗಿದ್ದು, ಈ ಹೆದ್ದಾರಿಯ ಸರ್ವೀಸ್ ರಸ್ತೆಯು ಇದೀಗ ಕೃಷಿ ಫಸಲಿನ ಕಣವಾಗಿದೆ. ಹೆದ್ದಾರಿಯ ಅಕ್ಕ-ಪಕ್ಕ ಹಾಗೂ ಸಮೀಪದ ಗ್ರಾಮಗಳಲ್ಲಿ ಜಮೀನು ಹೊಂದಿರುವ ರೈತರು, ತಮ್ಮ ಕೃಷಿ ಉತ್ಪನ್ನಗಳನ್ನು ಹೆದ್ದಾರಿಗೆ ತಂದು ಸುರಿದು ಒಣಗಿಸಿ ಸ್ವಚ್ಛಗೊಳಿಸುತ್ತಿದ್ದಾರೆ.
ಜಿಲ್ಲೆಯ ಕೃಷಿ ಪ್ರದೇಶದಲ್ಲಿ ಗೋವಿನ ಜೋಳ, ಸೋಯಾಬೀನ್, ಶೇಂಗಾ, ಹೆಸರು ಹಾಗೂ ಇತರ ಕೃಷಿ ಬೆಳೆಗಳನ್ನು ಬೆಳೆಯಲಾಗಿದೆ. ಇದೀಗ ಸೋಯಾಬೀನ್, ಶೇಂಗಾ ಕಟಾವು ಹಂತಕ್ಕೆ ಬಂದಿದೆ. ರೈತರು, ಸೋಯಾಬೀನ್ ಹಾಗೂ ಶೇಂಗಾ ಕಟಾವು ಮಾಡುತ್ತಿದ್ದಾರೆ.
ಯಂತ್ರಗಳ ಮೂಲಕ ಕಟಾವು ಮಾಡುವ ಸೋಯಾಬೀನ್ ಕಾಳುಗಳನ್ನು ರೈತರು ಹೆದ್ದಾರಿಗೆ ಸಾಗಿಸಿ ಒಣಗಿಸಿ ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ. ಕೃಷಿ ಕಾರ್ಮಿಕರಿಂದ ಕಟಾವು ಮಾಡಿಸಿದ ಸೋಯಾಬೀನ್ ಬೆಳೆಯನ್ನು ಗಿಡದ ಸಮೇತವಾಗಿ ಹೆದ್ದಾರಿಗೆ ಸಾಗಿಸುತ್ತಿರುವ ರೈತರು, ಅಲ್ಲಿಯೇ ಗಿಡಗಳಿಂದ ಕಾಳು ಬೇರ್ಪಡಿಸಿ ಒಣಗಿಸಿ ಮಾರುಕಟ್ಟೆಗೆ ಸಾಗಿಸುತ್ತಿದ್ದಾರೆ.
