ಉದಯವಾಹಿನಿ, ಬೆಂಗಳೂರು: ತನ್ನ ಬಳಿ ಬುಲೆಟ್ ಬೈಕ್ ಇಲ್ಲದಿರುವ ಹತಾಶೆಯಲ್ಲಿ ಪೆಟ್ರೋಲ್ ಕದ್ದು ನಗರದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್‌ನ ಪುಲಕೀತ್ (೨೫) ಬಂಧಿತ ಆರೋಪಿಯಾಗಿದ್ದಾನೆ, ಆರೋಪಿಯು ಸೆ.೧೯ರ ಬೆಳಗ್ಗೆ ಹೆಚ್.ಎಂ.ಟಿ ಲೇಔಟ್ ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಮೂರು ದ್ವಿಚಕ್ರವಾಹನಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ಬೆಂಕಿಯ ತೀವ್ರತೆಗೆ ಮೂರು ಬೈಕ್‌ಗಳಿಗೆ ಹಾನಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಾಲೇಜು ವಿದ್ಯಾರ್ಥಿ ದೀಪಾಂಶು ಅಗರವಾಲ್ ಎಂಬವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ದೂರು ನೀಡಿದ ವಿದ್ಯಾರ್ಥಿ ಪಿಜಿಯಲ್ಲಿ ನೆಲೆಸಿದ್ದು, ಕೆಲ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬುಲೆಟ್ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆ.೧೯ರಂದು ಪಿಜಿ ಮುಂದೆ ಬೈಕ್ ಪಾರ್ಕ್ ಮಾಡಿ ರಾತ್ರಿ ೧ ಗಂಟೆವರೆಗೆ ಮಾತನಾಡಿ ಮಲಗಿದ್ದೆ.
ಕೆಲ ಹೊತ್ತಿನ ಬಳಿಕ ಪಿಜಿಯಲ್ಲಿ ವಾಸವಾಗಿರುವ ಕೆಲವರು ಬಂದು ಬೈಕ್‌ಗೆ ಬೆಂಕಿ ಹೊತ್ತಿಕೊಂಡಿರುವ ವಿಚಾರ ತಿಳಿಸಿದರು.ಮಾರನೇ ದಿನ ಸಿಸಿಟಿವಿ ಪರಿಶೀಲಿಸಿದಾಗ, ಆರೋಪಿ ಪಾರ್ಕ್ ಮಾಡಲಾಗಿದ್ದ ಪೆಟ್ರೋಲ್ ಕದ್ದು ಮೂರು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿರುವ ವಿಷಯ ಗೊತ್ತಾಯಿತು ಎಂದು ಬೈಕ್ ಮಾಲೀಕ ಅಗರ್‌ವಾಲ್ ಪೊಲೀಸರಿಗೆ ದೂರು ನೀಡಿದ್ದರು.ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
