ಉದಯವಾಹಿನಿ, ಶಿಗ್ಗಾವಿ: ತಾಲ್ಲೂಕಿನ ಖುರ್ಸಾಪುರ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ನಿತ್ಯ ವಾಹನ ಚಾಲಕರು, ಪಾದಚಾರಿಗಳು ಸಂಚರಿಸಲು ಪರದಾಡುವಂತಾಗಿದೆ.
ಎರಡು ವರ್ಷಗಳಿಂದ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಕುಂಟುತ್ತ ಸಾಗಿದೆ.ಅದರಿಂದಾಗಿ ವಾಹನ ಚಾಲಕರು ಸಂಚಾರಕ್ಕೆ ಹರಸಾಹಸ ಪಡುತ್ತಿದ್ದಾರೆ. ಹುಬ್ಬಳ್ಳಿಯಿಂದ ಬೆಂಗಳೂರು, ದಾವಣಗೆರೆ, ಹಾವೇರಿ ಕಡೆ ಹೋಗುವ ಮತ್ತು ಬರುವ ವಾಹನಗಳಿಗೆ ಇಕ್ಕಟಾದ ರಸ್ತೆ ಮಾರ್ಗ ತೋರಿಸಲಾಗಿದೆ. ಆದರೆ ಅದರಲ್ಲಿ ದಾಟಿ ಹೋಗಬೇಕೆಂದರೆ ಕನಿಷ್ಠ ಒಂದು ಗಂಟೆ ಕಾಲ ಬೇಕಾಗುತ್ತಿದೆ. ಹೀಗಾಗಿ ಬೆಂಗಳೂರು, ಮೈಸೂರಿಗೆ ಹೋಗುವ ಬರುವ ವಾಹನಗಳಿಗೆ ತೊಂದರೆ ಆಗುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆ ಕಾಮಗಾರಿ ಆರಂಭದ ಮುನ್ನ ರಸ್ತೆಯ ಎರಡೂ ಬದಿ ಸರ್ವಿಸ್ ರಸ್ತೆ ಕಾಮಗಾರಿ ಮುಗಿಸಿ ಈ ರಸ್ತೆಯಲ್ಲಿ ಸುಗಮವಾಗಿ ವಾಹನಗಳು ಸಂಚರಿಸುವಂತೆ ಮಾಡಬೇಕಿತ್ತು. ಆದರೆ ಈ ರಸ್ತೆಗಳು ಈ ವರೆಗೂ ಪೂರ್ಣಗೊಂಡಿಲ್ಲ. ಇನ್ನೂ ಕೆಲವು ರಸ್ತೆಗಳಲ್ಲಿ ಗುಂಡಿಗಳು ಉಂಟಾಗಿದ್ದು, ವಾಹನಗಳು ಸಂಚರಿಸದಂತಾಗಿದೆ. ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಕ್ಕೆಲ್ಲ ಹೊಣೆಗಾರರು ಯಾರು ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇದನ್ನು ನೋಡಿಯೂ ನೋಡದಂತೆ ತಮ್ಮ ಪಾಡಿಗೆ ತಾವು ಇದ್ದಾರೆ.

Leave a Reply

Your email address will not be published. Required fields are marked *

error: Content is protected !!