ಉದಯವಾಹಿನಿ, ಬೆಂಗಳೂರು : ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಅಗತ್ಯ ಮಾಹಿತಿ ನೀಡಲು ರಾಜ್ಯಸರ್ಕಾರದ ವಿರೋಧವಿಲ್ಲ. ಆದರೆ ಸಂಪುಟದ ಗಮನಕ್ಕೆ ಬಂದು ವರದಿ ನೀಡುವುದರಿಂದ ಹೊಣೆಗಾರಿಕೆ ಹೆಚ್ಚಿರುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಎಲ್ಲಾ ಪತ್ರಗಳಿಗೂ ಉತ್ತರ ಕೊಡಲು ನಮ ಸರ್ಕಾರ ಸಿದ್ಧವಿದೆ. ಆದರೆ ಅದು ಸಂಪುಟದ ಗಮನಕ್ಕೆ ಬರಬೇಕಿದೆ.ಈ ಹಿಂದೆ ಅನೇಕ ಸಂದರ್ಭಗಳಲ್ಲಿ ಇಲಾಖೆಗಳಿಂದ ನೇರವಾಗಿ ಮಾಹಿತಿ ತೆಗೆದುಕೊಂಡು ಮುಖ್ಯಕಾರ್ಯದರ್ಶಿಯವರೇ ರಾಜ್ಯಪಾಲರಿಗೆ ವರದಿ ನೀಡಿರುವ ಉದಾಹರಣೆಗಳಿವೆ ಎಂದು ಹೇಳಿದರು.
ತೆರೆಮರೆಯಲ್ಲಿ ಯಾರೋ ಪತ್ರ ಬರೆಯುವುದು, ಯಾರೋ ಮಾಹಿತಿ ಪಡೆಯುವುದು ನಡೆಯುತ್ತಿದೆ. ಇದು ಸರಿಯಲ್ಲ. ಸಂಪುಟಕ್ಕೆ ಕಡತ ಮಂಡನೆಯಾದರೆ ಯಾವುದನ್ನು ರಾಜ್ಯಪಾಲರಿಗೆ ನೀಡಬೇಕು ಅಥವಾ ತಡೆಹಿಡಿಯಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ. ಸಂಪುಟದ ಗಮನಕ್ಕೆ ತಂದಾಗ ಮುಖ್ಯ ಕಾರ್ಯದರ್ಶಿಯವರು ಹೊಣೆಗಾರರಾಗುವುದಿಲ್ಲ. ಸರ್ಕಾರವೇ ಉತ್ತರದಾಯಿತ್ವವಾಗಿರುತ್ತದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾಗುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮುಡಾ ಪ್ರಕರಣದ ಕುರಿತು ತೀರ್ಪು ನೀಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆಡಳಿತ ಮಾಡುವವರು ಧರ್ಮ ಹಾಗೂ ನೈತಿಕತೆ ಪಾಲನೆ ಮಾಡಬೇಕು. ಇಲ್ಲವಾದರೆ ರಾವಣ ರಾಜ್ಯ ನಿರ್ಮಾಣವಾಗುತ್ತದೆ ಎಂದು ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಆಡಳಿತ ಮಾಡುವವರಷ್ಟೇ ಅಲ್ಲ, ಎಲ್ಲರೂ ಧರ್ಮಪಾಲನೆ ಮಾಡಬೇಕು ಎಂದರು. ಕಾನೂನು ಮಾಡುವವರಿಗೆ ಒಂದು ಧರ್ಮ, ನ್ಯಾಯಾಧೀಶರುಗಳಿಗೆ ಒಂದು ಧರ್ಮ ಎಂದು ಇರುವುದಿಲ್ಲ. ಎಲ್ಲರೂ ಧರ್ಮಪಾಲನೆ ಮಾಡಿದಾಗ ರಾಮರಾಜ್ಯವಾಗುತ್ತದೆ ಎಂದು ತಿಳಿಸಿದರು.
