ಉದಯವಾಹಿನಿ, ಉಡುಪಿ: ಜಿಲ್ಲೆಯಲ್ಲಿ ಗತ ಇತಿಹಾಸದ ಕುರುಹುಗಳಾಗಿ ಇಂದಿಗೂ ನೆಲೆನಿಂತಿರುವ ಹಲವು ಐತಿಹಾಸಿಕ ತಾಣಗಳು ಸೂಕ್ತ ಸಂರಕ್ಷಣೆ ಇಲ್ಲದೆ ಅಳಿವಿನಂಚಿಗೆ ತಲುಪಿವೆ.ಕೇವಲ ಐದು ಐತಿಹಾಸಿಗಳ ತಾಣಗಳಷ್ಟೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಅಧೀನದಲ್ಲಿವೆ. ಆದರೆ ಇನ್ನೂ ಹಲವು ಅಮೂಲ್ಯವಾದ ಐತಿಹಾಸಿಕ, ಪ್ರಾಗೈತಿಹಾಸಿಕ ತಾಣಗಳು ತೀವ್ರ ನಿರ್ಲಕ್ಷ್ಯಕ್ಕೊಳಗಾಗಿವೆ.
ಇಂತಹ ಐತಿಹಾಸಿಕ ತಾಣಗಳನ್ನು ಸಂರಕ್ಷಿಸಿ, ಪ್ರವಾಸಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಿದರೆ ಇನ್ನಷ್ಟು ಪ್ರವಾಸಿಗರು, ಇತಿಹಾಸ ಪ್ರೇಮಿಗಳು ಜಿಲ್ಲೆಗೆ ಭೇಟಿ ನೀಡಬಹುದು.ಬಾರ್ಕೂರಿನ ಕತ್ತಲೆ ಬಸದಿ, ಕಾರ್ಕಳದ ಗೊಮ್ಮಟೇಶ್ವರ ಪ್ರತಿಮೆ, ಚತುರ್ಮುಖ ಬಸದಿ, ಅನಂತಪದ್ಮನಾಭ ದೇವಾಲಯ ಮತ್ತು ಹಿರಿಯಂಗಡಿಯ ಮಾನಸ್ಥಂಭವು ಎಎಸ್‌ಐ ಅಧೀನದಲ್ಲಿವೆ.
12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು ಎಂದು ಅಂದಾಜಿಸಲಾದ ಬಾರ್ಕೂರಿನ ಕತ್ತಲೆ ಬಸದಿ ಸುಸ್ಥಿತಿಯಲ್ಲಿದ್ದರೂ ಇದರ ಸಮೀಪದ ಕಲ್ಲಿನ ಚಪ್ಪರದ ಕೆಲವು ಭಾಗಗಳು ಹಲವು ವರ್ಷಗಳ ಹಿಂದೆಯೇ ಕುಸಿದಿವೆ. ಈ ಬಸದಿಯಲ್ಲಿದ್ದ ಜೈನ ಮೂರ್ತಿಗಳು ಕೂಡ ನಾಪತ್ತೆಯಾಗಿ ಎಷ್ಟೋ ವರ್ಷಗಳು ಕಳೆದಿವೆ.
ತುಳುನಾಡಿನ ರಾಜಧಾನಿ ಎಂದು ತಿಳಿಯಲಾದ ಬಾರ್ಕೂರಿನ ಕೋಟೆಯ ಅವಶೇಷಗಳು ಸೂಕ್ತ ರಕ್ಷಣೆ ಇಲ್ಲದೆ ಕಣ್ಮರೆಯಾಗುತ್ತಿವೆ.
ಜಿಲ್ಲೆಯಲ್ಲಿ ಪ್ರಾಗೈತಿಹಾಸಿಕ ಕಾಲಕ್ಕೆ ಸಂಬಂಧಿಸಿದ ಆದಿಮ ಕಲೆಗಳಿರುವ ಅಮೂಲ್ಯ ತಾಣಗಳನ್ನು ಕೇಳುವವರೇ ಇಲ್ಲದೆ ನಾಶದಂಚಿಗೆ ತಲುಪಿವೆ.
ಕುಂದಾಪುರ ತಾಲ್ಲೂಕಿನ ಬುದ್ಧನ ಜೆಡ್ಡು, ಬೈಂದೂರು ತಾಲ್ಲೂಕಿನ ಅವಲಕ್ಕಿ ಪಾರೆಯಲ್ಲಿರುವ ಪ್ರಾಗೈತಿಹಾಸಿಕ ತಾಣಗಳು, ಕಾರ್ಕಳ ತಾಲ್ಲೂಕಿನ ಪಳ್ಳಿಯಲ್ಲಿರುವ ಬೃಹತ್ ಶಿಲಾಯುಗ ಕಾಲದ ಕಲ್ಮನೆ ಸಮಾಧಿ, ಕಾರ್ಕಳದಿಂದ ರೆಂಜಾಳಕ್ಕೆ ತೆರಳುವ ದಾರಿಯಲ್ಲಿ ಬರುವ ಬೋರ್ಕಟ್ಟೆಯಲ್ಲಿರುವ ಕಲ್ಮನೆ ಸಮಾಧಿಗಳು ಯಾವುದೇ ರಕ್ಷಣೆ ಇಲ್ಲದೆ ಸೊರಗುತ್ತಿವೆ.ಕಲ್ಲು ಗಣಿಗಾರಿಕೆ, ಕೈಗಾರಿಕಾ ಪ್ರದೇಶಗಳ ವಿಸ್ತರಣೆಯಿಂದಾಗಿಯೂ ಜಿಲ್ಲೆಯ ಹಲವು ಐತಿಹಾಸಿಕ ತಾಣಗಳು ಅವಸಾನದಂಚಿಗೆ ತಲುಪಿವೆ.
