ಉದಯವಾಹಿನಿ,ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸರ್ಕಾರಕ್ಕೆ ಖಾತೆ ಹಂಚಿಕೆ ಕಗ್ಗಂಟಾಗಿದ್ದು ತಮಗೆ ಸಾರಿಗೆ ಖಾತೆ ಕೊಡುವ ಲಕ್ಷಣ ಕಾಣುತ್ತಿದ್ದಂತೆಯೇ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ಈ ಮೂಲಕ ಅಧಿಕೃತವಾಗಿ ಸಿದ್ದು ಸಂಪುಟದ ಸಚಿವರಿಗೆ ಖಾತೆ ಹಂಚಿಕೆಗೆ ಮುನ್ನವೇ ಅಸಮಾಧನ ಸ್ಪೋಟಗೊಂಡಿದೆ ಎನ್ನಲಾಗುತ್ತಿದೆ.ಇದೇ ರೀತಿ ಹಲವು ಸಚಿವರು ತಮಗೆ ಸಿಗುವ ಖಾತೆಯ ಸುಳಿವು ಸಿಗುತ್ತಿದ್ದಂತೆಯೇ ಅಸಮಾಧಾನಗೊಂಡಿದ್ದು, ಉದ್ದೇಶಪೂರ್ವಕವಾಗಿ ತಮ್ಮನ್ನು ಅವಮಾನಿಸುವ ಪ್ರಯತ್ಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ತಮಗೆ ಸಾರಿಗೆ ಖಾತೆ ಕೊಡುವ ನಿರ್ಧಾರದ ಬಗ್ಗೆ ಕೆಂಡಾಮಂಡಲಗೊಂಡಿರುವ ಹಿರಿಯ ನಾಯಕರಾದ ರಾಮಲಿಂಗಾರೆಡ್ಡಿ, ಇದು ತಮ್ಮನ್ನು ಅವಮಾನಿಸುವ ಯತ್ನ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.ಈ ಹಿಂದೆ ನಾಲ್ಕು ವರ್ಷಕ್ಕೂ ಹೆಚ್ಚು ಕಾಲ ತಾವು ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದು, ಈಗ ಅದೇ ಖಾತೆಯನ್ನು ಕೊಡುವ ಅಗತ್ಯವಿರಲಿಲ್ಲ. ಗೃಹ ಸಚಿವರಾಗಿ ಕೆಲಸ ಮಾಡಿರುವ ತಮಗೆ ಇನ್ನೂ ಮಹತ್ವದ ಖಾತೆ ನೀಡಬೇಕಿತ್ತು. ಆದರೆ ಸಾರಿಗೆ ಖಾತೆಯನ್ನೇ ಕೊಡಲು ಮುಂದಾಗಿ ತಮ್ಮನ್ನು ಅವಮಾನಿಸಲಾಗುತ್ತಿದೆ ಎಂದಿದ್ದಾರೆ ಎನ್ನಲಾಗಿದೆ.ತಮಗಿಂತ ಕಿರಿಯರಿಗೆ ಮಹತ್ವದ ಖಾತೆಗಳನ್ನು ಕೊಟ್ಟು, ತಮಗೆ ಮಾತ್ರ ಹಿಂಬಡ್ತಿ ನೀಡುವ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ಇದು ಸರಿಯಲ್ಲ. ಸಾರಿಗೆ ಖಾತೆಯನ್ನೇ ನನಗೆ ಅಂಟಿಸುವುದಾದರೆ ನನಗೆ ಸಚಿವ ಸ್ಥಾನವೇ ಬೇಡ. ತಕ್ಷಣವೇ ರಾಜೀನಾಮೆ ಕೊಟ್ಟು ಬಿಡುತ್ತೇನೆ ಎಂದು ರಾಮಲಿಂಗಾರೆಡ್ಡಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗುತ್ತದೆ.
