ಉದಯವಾಹಿನಿ, ತಿ.ನರಸೀಪುರ: ಕೊನೆಗೂ ಕಾನೂನನ್ನೇ ಅಡ್ಡ ದಾರಿಯನ್ನಾಗಿ ಮಾಡಿಕೊಂಡು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯರ ಮೇಲೆ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಿಸಿ, ಹಿಂದುಳಿದ ಹಾಗೂ ಶೋಷಿತ ಸಮುದಾಯಗಳ ನಾಯಕತ್ವವನ್ನು ದಮನ ಮಾಡಲು ಷಡ್ಯಂತ್ರ ರೂಪಿಸಿರುವ ಕೇಂದ್ರ ಬಿಜೆಪಿ ಸರ್ಕಾರದ ನಡೆ ಖಂಡಿಸಿ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಶನಿವಾರ ಕಪ್ಪುಪಟ್ಟಿ ಧರಿಸಿ ಕರಾಳ ಮೌನ ಪ್ರತಿಭಟನೆ ನಡೆಸಿದರು.
ತಾಲೂಕು ಕಚೇರಿ ಉದ್ಯಾನವನದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಬಳಿ ಜಮಾವಣೆಗೊಂಡ ದಸಂಸ ಕಾರ್ಯಕರ್ತರು, ಹಿತೈಷಿಗಳು, ಶೋಷಿತ ಸಮುದಾಯಗಳ ಮುಖಂಡರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ತೋಳು ಮತ್ತು ಕುತ್ತಿಗೆ ಕಪ್ಪು ಪಟ್ಟಿಯನ್ನು ಧರಿಸಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ನ್ಯಾಯಾಂಗ ಮತ್ತು ಕಾರ್ಯಂಗವನ್ನು ಕೈಗೊಂಬೆಯಂತೆ ಆಡಿಸುತ್ತಾ ಯಾವುದೇ ಭ್ರಷ್ಟಚಾರ ನಡೆಸದ ಸಿದ್ದರಾಮಯ್ಯ ಅವರ ವಿರುದ್ಧ ಅಭಿಯೋಜನೆಗೆ ಆದೇಶಿಸಿ, ಎಫ್ ಐ ಆರ್ ದಾಖಲಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕರಾಳ ಮೌನ ಪ್ರತಿಭಟನೆ ನೇತೃತ್ವವನ್ನು ವಹಿಸಿದ್ದ ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಕೇಂದ್ರದ ಸ್ವಾಯತ್ತ ಸಂಸ್ಥೆಗಳು ರಾಜಕೀಯ ದುರುದ್ದೇಶಗಳಿಗೆ ದುರ್ಬಳಕೆಯಾಗುತ್ತಿವೆ. ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ಆಡಳಿತವನ್ನು ಹತ್ತಿರಗೊಳಿಸಬೇಕು. ಬಿಜೆಪಿ ವಿರುದ್ಧ ಪ್ರಬಲವಾಗಿ ಬೆಳೆಯುವ ನಾಯಕರನ್ನು ಅಧಿಕಾರದಿಂದ ಪದಚ್ಯುತಿಗೊಳಿಸಬೇಕು ಎಂಬುದು ಬಿಜೆಪಿಯ ಅಜಯಂದವಾಗಿದೆ. ಅದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬಲಿಪಶು ಮಾಡುವ ದೊಡ್ಡ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಬಿಜೆಪಿಗೆ ಸ್ಪಷ್ಟ ಜನಾದೇಶ ಸಿಗದ ಹಲವು ರಾಜ್ಯಗಳಲ್ಲಿ ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ಭ್ರಷ್ಟಾಚಾರದ ಹಣದ ಮೂಲಕ ಅಧಿಕಾರಕ್ಕೆ ಬಂದು, ಶೇ.40 ರಷ್ಟು ಕಮಿಷಣ ದಂಧೆ ನಡೆಸಿದರೂ ಯಾವುದೇ ತನಿಖೆಯಾಗಲಿ, ಹಗರಣದ ಪ್ರಕರಣವಾಗಲಿ ಆಗಲಿಲ್ಲ. ಬಿಜೆಪಿಯಲ್ಲಿರುವ ಹಲವು ನಾಯಕರು ಭ್ರಷ್ಟಾಚಾರಿಗಳಾಗಿದ್ದರೂ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನವನ್ನೇ ಮಾಡಿಲ್ಲವೆಂದು ಆರೋಪಿಸಿದರು.
