ಉದಯವಾಹಿನಿ, ಕಲಬುರಗಿ : ನಗರದ ಸೂಪರ್ ಮಾರ್ಕೆಟ್‌ನಲ್ಲಿರುವ ಬಳೆ ಮಾರಾಟ ಮಳಿಗೆಯ ವ್ಯಾಪಾರಿಯೊಬ್ಬರನ್ನು ಸಿನಿಮೀಯ ಶೈಲಿಯಲ್ಲಿ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ೩೪.೨೫ ಲಕ್ಷ ರೂ.ಸುಲಿಗೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳೆ ವ್ಯಾಪಾರಿ ಮಹಾರಾಷ್ಟ್ರ ಮೂಲದ ೨೫ ವರ್ಷದ ಯುವತಿ, ರಾಜು ಲೇಂಗಟಿ, ಪ್ರಭುಲಿಂಗ ಹಿರೇಮಠ, ಉಮೇಶ, ಮಂಜುನಾಥ ಕಲ್ಯಾಣಿ, ಶಹಾಬಾದ ಸ್ಟೇಷನ್ ತಾಂಡಾದ ವಿಕ್ರಂ, ಸಾಗರ್ ರಾಠೋಡ್, ಚಂದ್ರಕಾಂತ ಮೇಂಗಜಿ ಮತ್ತು ವಾಡಿಯ ಅಲೀಂ ವಿರುದ್ಧ ದೂರು ಸಲ್ಲಿಸಿದ್ದಾರೆ.
ವ್ಯಾಪಾರಿಯು ವ್ಯವಹಾರ ಸಂಬಂಧ ಆಗಾಗ ಹೈದ್ರಾಬಾದ, ಬೆಂಗಳೂರಿಗೆ ಹೋಗುತ್ತಿದ್ದರು. ವ್ಯಾಪಾರಿಯ ಪರಿಚಯಸ್ಥನಾಗಿದ್ದ ಪ್ರಭುಲಿಂಗ ಹಿರೇಮಠ ಮಹಾರಾಷ್ಟ್ರ ಮೂಲದ ಯುವತಿಗೆ ಆತನ ಫೋನ್ ನಂಬರ್ ಕೊಟ್ಟಿದ್ದರು. ಯುವತಿ ವ್ಯಾಪಾರಿ ಜೊತೆ ಆಗಾಗ ಫೋನ್‌ನಲ್ಲಿ ಮಾತನಾಡುತ್ತಿದ್ದರು. ವ್ಯಾಪಾರಿ ಹೈದ್ರಾಬಾದಗೆ ತೆರಳುವ ವಿಚಾರ ತಿಳಿದು ಇಬ್ಬರೂ ಅಲ್ಲಿಯೇ ಮುಖತ; ಭೇಟಿಯಾದರು. ಆ ವೇಳೆ ಯುವತಿ, ಪ್ರಭುಲಿಂಗ ಹಿರೇಮಠ ನಿಮ್ಮ ಫೋನ್ ನಂಬರ್ ಕೊಟ್ಟಿದ್ದಾನೆ.ಏನಾದರು ಕೆಲಸಕೊಡಿಸುವಂತೆ ಕೇಳಿಕೊಂಡಿದ್ದಾಳೆ. ನಂತರ ಹೈದ್ರಾಬಾದನ ಲಾಡ್ಜ್ ರೂಂ.ಕಾರಿಡಾರ್‌ನಲ್ಲಿ ಇಬ್ಬರೂ ಒಟ್ಟಿಗೆ ಇರುವ ಸೆಲ್ಫಿ ತೆಗೆದುಕೊಂಡ ಯುವತಿ ಭೇಟಿಯ ನೆನಪಿಗಾಗಿ ಎಂದು ನೆಪ ಹೇಳಿದ್ದಳು. ವ್ಯಾಪಾರಿ ಮರುದಿನ ಬೆಂಗಳೂರಿಗೆ ಹೋಗಿದ್ದು, ಅಲ್ಲಿಯೂ ಯುವತಿ ಭೇಟಿಯಾಗಿ ಮಾಲ್ ಒಂದರ ಮುಂದೆ ಸೆಲ್ಫಿ ತೆಗೆದುಕೊಂಡು ಅವುಗಳನ್ನು ಪ್ರಭು ಹಾಗೂ ರಾಜು ಅವರಿಗೆ ಕಳುಹಿಸಿದ್ದಾಳೆ.
ಆ ನಂತರ ಯುವತಿಯ ಸಂಬಂಧಿಕರು ಎಂದು ಹೇಳಿಕೊಂಡ ವಿಕ್ರಮ್ ಮತ್ತು ಉಮೇಶ್, ಬೆಂಗಳೂರಿನಲ್ಲಿ ಯುವತಿ ಜೊತೆಗೆ ಇದ್ದಾಗ ವ್ಯಾಪಾರಿಯೊಂದಿಗೆ ಜಗಳ ತೆಗೆದಿದ್ದಾರೆ. ನಮ್ಮ ಮನೆಯ ಹೆಣ್ಣು ಮಗಳೊಂದಿಗೆ ಏಕೆ ಕುಳಿತಿದ್ದೀಯಾ ಎಂದು ಹೆದರಿಸಿ ಕಾರಿನಲ್ಲಿ ಕೂರಿಸಿಕೊಂಡು ಶಹಾಬಾದ ಸಮೀಪ ಕರೆದುಕೊಂಡು ಹೋಗಿದ್ದಾರೆ.ಅಲ್ಲಿಗೆ ರಾಜು, ಪ್ರಭು, ಅಲೀಂ, ಮಂಜುನಾಥ ಆಗಮಿಸಿ ಯುವತಿ ಜೊತೆಗೆ ಇರುವ ಫೋಟೋಗಳನ್ನು ಆಕೆಯ ಮನೆಯವರು ನೋಡಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡರೆ ಅತ್ಯಾಚಾರ ಕೇಸ್ ಹಾಕುತ್ತಾರೆ ಎಂದು ವ್ಯಾಪಾರಿಗೆ ಹೆದರಿಸಿ ೧ ಕೋಟಿ ಕೊಟ್ಟರೆ ಪ್ರಕರಣವನ್ನು ಮುಚ್ಚಿ ಹಾಕುವುದಾಗಿ ಹೇಳಿದ್ದಾರೆ. ಕೊನೆಗೆ ೪೦ ಲಕ್ಷ ಕೊಡುವಂತೆ ಒಪ್ಪಿಕೊಂಡರು ಎಂದು ವ್ಯಾಪಾರಿ ದೂರಿನಲ್ಲಿ ತಿಳಿಸಿದ್ದಾರೆ.
