ಉದಯವಾಹಿನಿ,ಬೆಂಗಳೂರು : ಗೃಹಸಚಿವ ಡಾ.ಜಿ.ಪರಮೇಶ್ವರ್‌ರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಇಂದು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು.ರಾಜಕೀಯ ಸೂಕ್ಷ್ಮ ಸನ್ನಿವೇಶದಲ್ಲಿ ಈ ಇಬ್ಬರೂ ನಾಯಕರ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
ಖುದ್ದು ಡಿ.ಕೆ.ಶಿವಕುಮಾರ್‌ರವರೇ ಪರಮೇಶ್ವರ್‌ ಅವರ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದು, ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್‌ರವರು, ರಾಜ್ಯದಲ್ಲಿ ಮಳೆ ಕಡಿಮೆಯಾಗುತ್ತಿದೆ. ತುಮಕೂರು, ಬೆಂಗಳೂರು, ಮಂಡ್ಯಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಶುರುವಾಗಿದೆ.
ಎತ್ತಿನಹೊಳೆಯಿಂದ ನೀರನ್ನು ಹೊರಗೆ ತೆಗೆಯಲಾಗಿದೆ. ಬಾಕಿ ಕಾಮಗಾರಿ ಮುಂದುವರೆಸಲು ಅರಣ್ಯ ಭೂಮಿ ಅಡ್ಡ ಬಂದಿದೆ. ಅದಕ್ಕೆ ಪರ್ಯಾಯ ಜಾಗ ನೀಡಲು ತುಮಕೂರು ಮತ್ತು ಹಾಸನದಲ್ಲಿ ಜಿಲ್ಲಾಡಳಿತಗಳು ಸ್ಥಳ ಗುರುತಿಸಿವೆ. ಮುಂದಿನ ವರ್ಷದೊಳಗೆ ತುಮಕೂರಿಗೆ ನೀರು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದರು.
ಹಿಂದಿನ ಬಿಜೆಪಿ ಸರ್ಕಾರ ಬೈರಗೊಂಡ್ಲು ಜಲಾಶಯದ ಯೋಜನೆಯನ್ನು ಬದಲಾವಣೆ ಮಾಡಿದೆ. ದೊಡ್ಡಬಳ್ಳಾಪುರ ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ಗಡಿಭಾಗವಾಗಿರುವುದರಿಂದ ಪರಿಹಾರ ವಿಚಾರವಾಗಿ ತಗಾದೆಗಳಿವೆ.ಪರಮೇಶ್ವರ್‌ ಮತ್ತು ತಾವು ಎತ್ತಿನಹೊಳೆಯಿಂದ ಯೋಜನೆಯುದ್ದಕ್ಕೂ ದಸರಾ ಮುಗಿದ ಬಳಿಕ ವೈಮಾನಿಕ ಸಮೀಕ್ಷೆ ನಡೆಸುತ್ತೇವೆ. ನಾನು ಬೈರಗೊಂಡ್ಲು ಜಲಾಶಯದ ಸ್ಥಳವನ್ನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.ಈ ನಡುವೆ ಸಂಪರ್ಕ ಕಾಲುವೆಗಳ ಬಗ್ಗೆ ಸಮಿತಿ ರಚಿಸಲಾಗಿದೆ. ತಮ ಸರ್ಕಾರ ಕುಡಿಯುವ ನೀರು ಪೂರೈಸುವ ಭರವಸೆಯನ್ನು ಈಡೇರಿಸಲು ಬದ್ಧತೆ ತೋರಿಸುತ್ತೇವೆ ಎಂದರು.
ಈ ವೇಳೆ ರಾಜಕೀಯ ಕುರಿತು ಚರ್ಚೆಯಾಗಿದೆಯೇ ಎಂಬ ಪ್ರಶ್ನೆಗೆ ಖಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಪತ್ರಕರ್ತರಿಗೆ ರಾಜಕೀಯ ಬಿಟ್ಟು ಬೇರೆ ಗೊತ್ತಿಲ್ಲವೇ?, ಜನ ನಮಗೆ ಅಧಿಕಾರ ನೀಡಿದ್ದಾರೆ. ಕೊಟ್ಟ ಭರವಸೆಗಳನ್ನು ಈಡೇರಿಸುವತ್ತ ಮತ್ತು ಪ್ರಣಾಳಿಕೆಯಲ್ಲಿನ ಆಶ್ವಾಸನೆಗಳನ್ನು ಪೂರ್ಣಗೊಳಿಸಲು ಹೆಚ್ಚಿನ ಆದ್ಯತೆ ನೀಡುತ್ತೇವೆ.

ಮುಂದಿನ ದಿನಗಳಲ್ಲಿ ಜನರಿಗೆ ನಾವು ಏನು ಮಾಡಿದ್ದೇವೆ ಎಂದು ಹೇಳಿಕೊಳ್ಳುವ ಅಗತ್ಯವಿದೆ. ಆದ್ದರಿಂದ ಅಭಿವೃದ್ಧಿ ವಿಚಾರವನ್ನು ಆಯ್ಕೆ ಮಾಡಿದ್ದೇವೆ. ರಾಜಕೀಯ ಕುರಿತು ಪ್ರತಿದಿನವೂ ಮಾತನಾಡುತ್ತಲೇ ಇರುತ್ತೇವೆ ಎಂದು ಹೇಳಿದರು.ಹಗಲು-ರಾತ್ರಿ ಸಮಯ ಓಡುತ್ತಿದೆ. ಅಭಿವೃದ್ಧಿಯ ಕುರಿತು ಹೆಚ್ಚಿನ ಒತ್ತು ನೀಡುತ್ತಿದ್ದೇವೆ ಎಂದರು.

 

Leave a Reply

Your email address will not be published. Required fields are marked *

error: Content is protected !!