ಉದಯವಾಹಿನಿ,ಬೆಂಗಳೂರು: ಸಾಯಿ ಮಿನರಲ್ಸ್ ಪ್ರಕರಣದಲ್ಲಿ ಲೋಕಾಯುಕ್ತ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಕೇಂದ್ರ ಸಚಿವ ಎಚ್‌.ಡಿ.ಕುಮಾರ ಸ್ವಾಮಿಯವರ ಜಾಮೀನು ರದ್ದು ಕೋರಿ ಎಸ್‌‍ಐಟಿ ಹೈಕೋರ್ಟ್‌ ಮೆಟ್ಟಿಲೇರಲು ಮುಂದಾಗಿದೆ.ಗಮನಿಸಬೇಕಾದ ಅಂಶವೆಂದರೆ ಮೂರು ದಿನಗಳ ಹಿಂದಷ್ಟೇ ಕುಮಾರಸ್ವಾಮಿಯವರು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ವಿರುದ್ಧ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದರು.
ಇದರ ಬೆನ್ನಲೇ ಎಸ್‌‍ಐಟಿ ಲೋಕಾಯುಕ್ತ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಮೇಲನವಿ ಅರ್ಜಿ ಸಲ್ಲಿಕೆಗೆ ತಯಾರಿ ನಡೆಸಿದೆ.ಶನಿವಾರ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಕುಮಾರಸ್ವಾಮಿ, ಲೋಕಾಯುಕ್ತ ಡಿವೈಎಸ್ಪಿ ಕವಿತಾ ಮತ್ತು ತನಿಖಾಧಿಕಾರಿಗಳು ಮುಂದಿಟ್ಟ ಕೆಲವು ಪ್ರಶ್ನೆಗಳಿಗೆ ಅಸಮರ್ಪಕ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಅಸಹಕಾರ ತೋರಿದ ಹಿನ್ನಲೆಯಲ್ಲಿ ನಿರೀಕ್ಷಣಾ ಜಾಮೀನು ರದ್ದು ಕೋರಿ ಮೇಲನವಿ ಸಲ್ಲಿಸಲು ಎಸ್‌‍ಐಟಿ ತೀರ್ಮಾನಿಸಿದೆ. ಈ ಸಂಬಂಧ ಸೋಮವಾರ ಕಾನೂನು ತಜ್ಞರ ಜೊತೆ ಸಾಧಕಬಾಧಕಗಳ ಬಗ್ಗೆ ಚರ್ಚೆ ನಡೆಸಲಾಗಿದೆ.

ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್‌ ವಿರುದ್ದ ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಇದು ಕರ್ತವ್ಯಕ್ಕೆ ಅಡ್ಡಿಪಡಿಸುವ ತಂತ್ರವಾಗಿದೆ. ಅವರು ಎಷ್ಟೇ ಆರೋಪ ಮಾಡಿದರೂ ಆರೋಪಿ ಆರೋಪಿಯೇ ಎಂದು ತಿರುಗೇಟು ನೀಡಿದ್ದರು. ಲೋಕಾಯುಕ್ತ ಪೊಲೀಸ್‌‍ ವರಿಷ್ಠಾಧಿಕಾರಿ 2023ರ ಸೆಪ್ಟೆಂಬರ್‌ನಲ್ಲಿ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಪತ್ರ ಬರೆದಿದ್ದರು. 2006ರಲ್ಲಿ ಬಿಜೆಪಿ-ಜೆಡಿಎಸ್‌‍ ಸಮಿಶ್ರ ಸರ್ಕಾರವಿದ್ದಾಗ ಮುಖ್ಯಮಂತ್ರಿಯಾಗಿದ್ದ ಎಚ್‌ ಕುಮಾರಸ್ವಾಮಿ ಅವರು ಎಂಸಿಆರ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಜೊತೆಗೂಡಿ ವಿನೋದ್‌ ಗೋಯಲ್‌ ಎಂಬ ವ್ಯಕ್ತಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿನ 550 ಎಕರೆ ಭೂಮಿ ಮಂಜೂರು ಮಾಡಲು ಒಳಸಂಚು ರೂಪಿಸಿದ್ದಾರೆ ಎಂಬುದು ಆರೋಪವಾಗಿದೆ.

Leave a Reply

Your email address will not be published. Required fields are marked *

error: Content is protected !!