ಉದಯವಾಹಿನಿ, ಚಿತ್ರದುರ್ಗ: ನಗರದ ಬಹುತೇಕ ವೃತ್ತಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದರಿಂದ, ದಿನೇದಿನೇ ಟ್ರಾಫಿಕ್ ಕಿರಿಕಿರಿ ಹೆಚ್ಚುತ್ತಿದ್ದು ಇಲ್ಲಿ ಒಡಾಡುವ ಜನರು ಹೈರಾಣಾಗುತ್ತಿದ್ದಾರೆ.ನಗರದ ಹೃದಯ ಭಾಗವಾಗಿರುವ ಗಾಂಧಿವೃತ್ತ ತೀರಾ ಅವೈಜ್ಞಾನಿಕವಾಗಿದ್ದು ಜನರಿಗೆ ಇಲ್ಲಿ ಓಡಾಡುವುದು ತೀವ್ರ ಕಷ್ಟವಾಗಿದೆ.
ಹೊಳಲ್ಕೆರೆ ರಸ್ತೆ, ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ರಸ್ತೆ, ಲಕ್ಷ್ಮಿ ಬಜಾರ್, ಸಂತೆ ಹೊಂಡ, ಬಿ.ಡಿ.ರಸ್ತೆ ಸೇರುವ ಗಾಂಧಿ ವೃತ್ತ ತೀರಾ ಕಿರಿದಾಗಿದ್ದು ಜನ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
5 ರಸ್ತೆಗಳು ಸೇರುವ ಈ ಜಾಗದಲ್ಲಿ ಪೊಲೀಸರು ಟ್ರಾಫಿಕ್ ನಿರ್ವಹಣೆ ಮಾಡುವುದಕ್ಕೂ ಜಾಗ ಇಲ್ಲವಾಗಿದೆ. ವೃತ್ತದ ಮೂಲೆಯಲ್ಲಿ ನಿಂತು ಪೊಲೀಸರು ಮೈಕ್‌ನಲ್ಲಿ ಘೋಷಣೆ ಮೂಲಕ ಟ್ರಾಫಿಕ್ ನಿಯಂತ್ರಣ ಮಾಡುತ್ತಾರೆ. ಜನರು ಕೂಡ ಟ್ರಾಫಿಕ್ ನಿಯಮಗಳನ್ನು ಮೀರಿ ಬೇಕಾಬಿಟ್ಟಿಯಾಗಿ ವಾಹನ ಚಾಲನೆ ಮಾಡುವ ಕಾರಣ ಇಲ್ಲಿ ವಾಹನ ಸಂಚಾರ ಸವಾಲಾಗಿ ಪರಿಣಮಿಸಿದೆ.
ಖಾಸಗಿ ಬಸ್ ನಿಲ್ದಾಣ ಸಮೀಪದಲ್ಲೇ ಇರುವ ಕಾರಣ ಖಾಸಗಿ ಬಸ್‌ಗಳ ಓಡಾಟವೂ ಸಮೀಪದಲ್ಲೇ ಇದೆ. ಇಲ್ಲಿ ಆಟೊ ನಿಲ್ದಾಣವೂ ಇದ್ದು ಜಾಗ ಕಿಷ್ಕಿಂದೆಯಂತಾಗಿದೆ. ಬಿ.ಡಿ ರಸ್ತೆಯಲ್ಲಿ ನಿತ್ಯವೂ ಹೆಚ್ಚಿನ ವಾಹನಗಳು ಓಡಾಡುವ ಕಾರಣ ಯಾವಾಗಲೂ ಟ್ರಾಫಿಕ್ ಜಾಮ್ ಉಂಟಾಗಿರುತ್ತದೆ. ಮೆದೇಹಳ್ಳಿ ಕಡೆಗೆ ಇದೇ ರಸ್ತೆಯಲ್ಲಿ ತೆರಳಬೇಕಾದ ಕಾರಣ ವಾಹನ ಸಂದಣಿ ಹೆಚ್ಚಾಗಿರುತ್ತದೆ. ಟ್ರಾಫಿಕ್ ನಿರ್ವಹಣೆಯೇ ಪೊಲೀಸರಿಗೆ ತಲೆನೋವಾಗಿ ಕಾಡುತ್ತಿದೆ.
ಗಾಂಧಿ ವೃತ್ತವನ್ನು ವಿಸ್ತರಣೆ ಮಾಡಿ ವೈಜ್ಞಾನಿಕವಾಗಿ ನಿರ್ಮಾಣ ಮಾಡುವ ಪ್ರಯತ್ನ ನಗರಸಭೆ ವತಿಯಿಂದ ನಡೆದಿವೆ. ಆದರೆ ಇಲ್ಲಿಯವರೆಗೂ ಅದು ಕೈಗೂಡಿಲ್ಲ. ಜೊತೆಗೆ ಗಾಂಧಿ ವೃತ್ತದ ಸಮೀಪದಲ್ಲೇ ಸೂಪರ್ ಮಾರುಕಟ್ಟೆ ನಿರ್ಮಾಣ ಸಂಬಂಧ ಕಟ್ಟಡವೊಂದರ ಕಾಮಗಾರಿ ಅರ್ಧಕ್ಕೆ ನಿಂತಿದೆ. ಅಲ್ಲಿ ಸೂಪರ್ ಮಾರುಕಟ್ಟೆ ನಿರ್ಮಾಣ ಕೈಬಿಟ್ಟು ವೃತ್ತವನ್ನು ವಿಸ್ತರಣೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಾರೆ.
ಒನಕೆ ಓಬವ್ವ ವೃತ್ತದಲ್ಲೂ ಕಿರಿಕಿರಿ: ಜಿಲ್ಲಾಧಿಕಾರಿ ಕಚೇರಿಯ ಸಮೀಪದಲ್ಲೇ ಇರುವ ಒನಕೆ ಓಬವ್ವ ವೃತ್ತ ನಗರದ ಪ್ರತಿಷ್ಠಿತ ವೃತ್ತವೂ ಆಗಿದೆ. ಈ ಜಾಗದಲ್ಲೂ ಐದು ರಸ್ತೆಗಳು ಕೂಡುತ್ತವೆ. ಜಿಲ್ಲಾಧಿಕಾರಿ ಕಚೇರಿಗೆ ಕಡೆಗೆ, ಬಿ.ಡಿ.ರಸ್ತೆ ಕಡೆಗೆ, ಪ್ರವಾಸಿ ಮಂದಿರ, ಅಂಬೇಡ್ಕರ್ ವೃತ್ತಗಳ ಕಡೆಗೆ ಸಂಪರ್ಕ ಕಲ್ಪಿಸುತ್ತದೆ.
