ಉದಯವಾಹಿನಿ, ನರಗುಂದ: ಬಂಡಾಯದ ನಾಡು ನರಗುಂದದಲ್ಲಿ ಕೆಲವು ವರ್ಷಗಳ ಹಿಂದೆ ಜನ, ಜಾನುವಾರುಗಳ ಕುಡಿಯುವ ನೀರಿಗೆ ಆಧಾರವಾಗಿದ್ದ ಪಟ್ಟಣದ ಐದು ಕೆರೆಗಳು ಈಗ ಇದ್ದೂ ಇಲ್ಲದಂತಾಗಿವೆ. ಐತಿಹಾಸಿಕ ಕೆರೆಗಳೆಂದು ಭೇಟಿ ಕೊಟ್ಟರೆ ಅಲ್ಲಿ ಸಿಗುವುದು ಕೊಳಚೆ ನೀರು ಹಾಗೂ ಜಾಲಿ ಕಂಟಿಗಳ ದರ್ಶನ.
ಸರ್ಕಾರದ ನಿರ್ಲಕ್ಷ್ಯ, ನಾಗರಿಕ ಪ್ರಜ್ಞೆ ಕೊರತೆ, ಕೆರೆ ಅಭಿವೃದ್ಧಿ ಪ್ರಾಧಿಕಾರ ಕಣ್ಣೆತ್ತಿ ನೋಡದಿರುವುದು, ಪುರಸಭೆ ಗಮನಹರಿಸದಿರುವುದೇ ಈ ದುಃಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಪಂಚಬಣಗಳಿಂದಾದ ನರಗುಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸಲುವಾಗಿ ಎಲ್ಲ ದಿಕ್ಕುಗಳಲ್ಲೂ ಕೆರೆ ನಿರ್ಮಾಣ ಮಾಡಲಾಗಿದೆ. ನರಗುಂದದ ಅರಸು ಭಾಸ್ಕರರಾವ್ ಭಾವೆ ನಿರ್ಮಿಸಿದ ಐತಿಹಾಸಿಕ ಪಡುವನಗೊಂಡ ಕೆರೆ, ಸೋಮಾಪುರ ಕೆರೆ, ಹಾಲಭಾವಿ ಕೆರೆ, ತೋಟದ ಕೆರೆ, ತುರಂಗಭಾವಿ ಕೆರೆ, ಬಸವಣ್ಣನ ಕೆರೆ ಹಾಗೂ ಎರಡು ದಶಕಗಳ ಹಿಂದಷ್ಟೇ ನಿರ್ಮಿಸಿದ ಕೆಂಪಗೆರೆ ಸಹಿತ ಇಂದು ಬಳಕೆಯಾಗದೇ ಇರುವುದಕ್ಕೆ ಅವು ದನಕರುಗಳ ಆವಾಸವಾಗುತ್ತಿವೆ. ಇದರಿಂದ ಜಲಮೂಲಗಳು ಮಾಯವಾಗುವ ದುಃಸ್ಥಿತಿಗೆ ತಲುಪಿವೆ.
ಸೋಮಾಪುರ ಕೆರೆ: ಹುಬ್ಬಳ್ಳಿ- ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೆರೆ ಅರ್ಧ ನರಗುಂದ ಪಟ್ಟಣಕ್ಕೆ ನೀರು ಸರಬರಾಜು ಮಾಡುತ್ತಿತ್ತು. ಒಂದು ವರ್ಷದ ಹಿಂದಿನವರೆಗೂ ಈ ಕೆರೆಯ ನೀರನ್ನು ಕುಡಿಯಲಿಕ್ಕೆ ಹಾಗೂ ಜಾನುವಾರುಗಳಿಗೆ ಬಳಸಲಾಗುತ್ತಿತ್ತು. ಆದರೆ, ಈಚೆಗೆ ಅದು ಸಂಪೂರ್ಣ ಹದಗೆಟ್ಟಿದೆ. ಕಂಟಿ ಆವರಿಸಿದೆ. ಕೆರೆಯ ಸುತ್ತಲೂ ಶೌಚ, ಮೂತ್ರ ಮಾಡುವುದು ನಡೆಯುತ್ತಿದೆ. ಇದರಿಂದ ಈ ಕೆರೆ ಕೂಡ ಸಂಪೂರ್ಣ ಹಾಳಾಗುವ ಸ್ಥಿತಿ ತಲುಪಿದೆ.

Leave a Reply

Your email address will not be published. Required fields are marked *

error: Content is protected !!