ಉದಯವಾಹಿನಿ, ಬೆಂಗಳೂರು: ಹಳೆದ್ವೇಷದ ಹಿನ್ನಲೆಯಲ್ಲಿ ಆಕ್ರೋಶಗೊಂಡು ರೌಡಿಗಳ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ೬ ಮಂದಿ ರೌಡಿಗಳನ್ನು ಬಂಧಿಸುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ರೌಡಿಗಳಾದ ರಮೇಶ್ ಅಲಿಯಾಸ್ ಬಳಿಲು, ತೇಜಸ್ ಅಲಿಯಾಸ್ ಟೈಗರ್, ಮಂಜುನಾಥ ಅಲಿಯಾಸ್ ಮೂತಿ, ನಂದಿನಿ ಲೇಔಟ್‌ನ ಅರುಣ್, ದೀಕ್ಷಿತ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಸೆ.೨೬ ರಂದು ರಾತ್ರಿ ೧೧.೧೫ರ ವೇಳೆ ಲಗ್ಗೆರೆಯ, ಕಪಿಲಾನಗರದ ೪ನೇ ಕ್ರಾಸ್‌ನ ಮನೆಯ ೪ನೇ ಮಹಡಿಯಲ್ಲಿ ನಂದಿನಿ ಲೇಔಟ್ ರೌಡಿ ಶೀಟರ್ ನರೇಂದ್ರ ಅಲಿಯಾಸ್ ದಾಸ ಹಾಗೂ ಆತನ ಸ್ನೇಹಿತರಾದ ರೌಡಿ ಸ್ನೇಹಿತ ವಿಕ್ರಮ ಅಲಿಯಾಸ್ ವಿಕ್ಕಿ, ನರೇಂದ್ರ ಅಲಿಯಾಸ್ ಶಿವು, ದರ್ಶನ ಮತ್ತು ಭರತ ಅಲಿಯಾಸ್ ಭೈರ ಎಲ್ಲರೂ ಸೇರಿ ಊಟ ಮಾಡಿ ಮಾತನಾಡುತ್ತಾ ಕುಳಿತಿದ್ದರು. ಈ ವೇಳೆ ಕೊಲೆ ಮಾಡುವ ಉದ್ದೇಶದಿಂದ ಬಂಧಿತ ಆರೋಪಿಗಳು ಬೈರ, ವಿಕ್ಕಿ, ಶಿವು ಮತ್ತು ದರ್ಶನ ರವರಿಗೂ ಮಾರಣಾಂತಿಕವಾಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.
ಗಾಯಗೊಂಡಿರುವ ಬೈರ, ವಿಕ್ಕಿ, ಶಿವು ಮತ್ತು ದರ್ಶನ ನಾಲ್ವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರೌಡಿ ಶೀಟರ್ ನರೇಂದ್ರ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿ
ಕಾರ್ಯಾಚರಣೆ ಕೈಗೊಂಡು ಲಗ್ಗೆರೆ ಹಳೇ ಬಸ್ ನಿಲ್ದಾಣದ ಬಳಿ ಆರು ಮಂದಿ ಆರೋಪಿಗಳನ್ನು ಬಂಧಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದರು.
