ಉದಯವಾಹಿನಿ, ಕೊಪ್ಪಳ: ರಾಜ್ಯದ ಆಯಾ ಜಿಲ್ಲೆಗಳಲ್ಲಿ ವಾರ್ಷಿಕವಾಗಿ ಆಚರಣೆ ಮಾಡುವ ಉತ್ಸವಗಳ ಮಾಹಿತಿಯನ್ನು ಸಾಕಷ್ಟು ಸಮಯಕ್ಕೂ ಮೊದಲೇ ನೀಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದು, ಈ ಕುರಿತು ಪತ್ರವನ್ನೂ ಬರೆದಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಕನಕಗಿರಿ ಹಾಗೂ ಆನೆಗೊಂದಿ ಉತ್ಸವಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಉತ್ಸವಗಳು ಆರಂಭವಾದ ಹೊಸತರಲ್ಲಿ ಇದ್ದ ಹುಮ್ಮಸ್ಸು ಬಳಿಕ ಇರಲಿಲ್ಲ. ಸಾಕಷ್ಟು ಬಿಡುವಿನ ಬಳಿಕ ಇದೇ ವರ್ಷ ಒಂದು ವಾರದ ಅಂತರದಲ್ಲಿಯೇ ಕನಕಗಿರಿ ಹಾಗೂ ಆನೆಗೊಂದಿ ಉತ್ಸವಗಳು ನಡೆದಿದ್ದವು. ಇವುಗಳನ್ನು ಆಯೋಜನೆ ಮಾಡುವಲ್ಲಿ ಸರ್ಕಾರಿ ಅಧಿಕಾರಿಗಳು ಹೈರಾಣಾಗಿದ್ದರು.
ಹಣಕಾಸಿನ ಲಭ್ಯತೆ, ಪೂರ್ವಾನುಮತಿ, ಟೆಂಡರ್, ವಿವಿಧ ಕಾರ್ಯಕ್ರಮಗಳಿಗೆ ಸಿದ್ಧತೆ, ಕಲಾ ತಂಡಗಳ ಆಹ್ವಾನ ಹೀಗೆ ಎಲ್ಲ ಅನುಕೂಲಗಳನ್ನು ನೋಡಿಕೊಂಡೇ ಉತ್ಸವಗಳನ್ನು ನಡೆಸಬೇಕಾಗಿದ್ದರೂ ಹಿಂದಿನ ಬಾರಿ ತರಾತುರಿಯಲ್ಲಿ ಎರಡೂ ಉತ್ಸವಗಳನ್ನು ನಡೆಸಲಾಗಿತ್ತು.
ಆದ್ದರಿಂದ ಹಂಪಿ ಉತ್ಸವ ಹಾಗೂ ಕಿತ್ತೂರು ಉತ್ಸವಗಳ ಮಾದರಿಯಲ್ಲಿಯೇ ಪ್ರತಿವರ್ಷವೂ ನಿಗದಿತ ದಿನಾಂಕಗಳಂದೇ ಜಿಲ್ಲೆಗಳಲ್ಲಿ ಉತ್ಸವಗಳನ್ನು ನಡೆಸಲು ಸಾಕಷ್ಟು ಸಮಯಕ್ಕೂ ಮೊದಲು ದಿನಾಂಕ ನಿಗದಿ ಮಾಡಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದ್ದರೂ ಇದನ್ನು ಅನುಷ್ಠಾನಕ್ಕೆ ತರಲು ಯಾವ ಸರ್ಕಾರಗಳೂ ಆಸಕ್ತಿ ತೋರಿಲ್ಲ.
ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಜವಾಬ್ದಾರಿ ಹೊತ್ತಿರುವ ಸಚಿವ ಶಿವರಾಜ ತಂಗಡಗಿ ಕೊಪ್ಪಳ ಜಿಲ್ಲೆಯವರೇ ಇದ್ದು, ಈ ಬಾರಿಯೂ ಆನೆಗೊಂದಿ ಹಾಗೂ ಕನಕಗಿರಿ ಉತ್ಸವಗಳನ್ನು ನಡೆಸಲು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಕೆಲ ದಿನಗಳ ಹಿಂದೆಯಷ್ಟೇ ಇಲಾಖೆಯ ನಿರ್ದೇಶಕರು ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಅಧೀನದಲ್ಲಿ ವಾರ್ಷಿಕವಾಗಿ ನಡೆಯುವ ಎಲ್ಲ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕುಗಳ ಉತ್ಸವಗಳ ಪಟ್ಟಿ ಮಾಡಿ ಯಾವ ದಿನಾಂಕ ಉತ್ಸವ ಆಚರಿಸಲಾಗುವುದು ಎನ್ನುವ ಪೂರ್ಣ ವಿವರಗಳನ್ನು ಕಳುಹಿಸಬೇಕು.
