ಉದಯವಾಹಿನಿ, ಬೀದರ್‌: ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಯಾತ್ರೆ ಜಿಲ್ಲೆ ಪ್ರವೇಶಿಸಿತು. ಕಲಬುರಗಿ ಜಿಲ್ಲೆಯ ಮೂಲಕ ಬೀದರ್‌ ಜಿಲ್ಲೆ ಗಡಿಭಾಗದ ಹಳ್ಳಿಖೇಡ್‌ (ಕೆ) ಗ್ರಾಮಕ್ಕೆ ರಥ ಪ್ರವೇಶಿಸುತ್ತಿದ್ದಂತೆ ಕನ್ನಡಾಭಿಮಾನಿಗಳು, ಗ್ರಾಮಸ್ಥರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಸ್ವಾಗತ ಕೋರಿದರು.

ಬೀದರ್‌ ಜಿಲ್ಲೆಯಾದ್ಯಂತ ಸಂಚರಿಸಲಿರುವ ರಥಯಾತ್ರೆಗೆ ಹಿರಿಯ ಸಾಹಿತಿ ಎಸ್‌.ಎಲ್‌. ಭೈರಪ್ಪನವರು ಚಾಲನೆ ನೀಡಿದರು. ಅಲಂಕರಿಸಿದ ಕನ್ನಡ ರಥದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಭೈರಪ್ಪನವರು ಮಾಲಾರ್ಪಣೆ ಮಾಡಿದರು. ಈ ವೇಳೆ ಕನ್ನಡಪರ, ಭುವನೇಶ್ವರಿ ತಾಯಿ ಹಾಗೂ ಸಾಹಿತ್ಯ ಸಮ್ಮೇಳನಕ್ಕೆ ಜಯವಾಗಲಿ ಎಂದು ಘೋಷಣೆಗಳನ್ನು ಹಾಕಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನಶೆಟ್ಟಿ, ಹುಮನಾಬಾದ್‌ ತಹಶೀಲ್ದಾರ್‌ ಅಂಜುಂ ತಬಸುಮ್‌, ಪರಿಷತ್ತಿನ ಹುಮನಾಬಾದ್‌ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗ ವಿ. ನಿರ್ಣಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರಡ್ಡಿ ಮಾಲಿಪಾಟೀಲ, ಪ್ರೌಢ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶೇಕ್‌ ಮೆಹಬೂಬ್‌ ಪಟೇಲ್‌ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!