ಉದಯವಾಹಿನಿ, ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಸ್ಥಾನಕ್ಕೆ ಕೆ.ಮರಿಗೌಡ ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌ ಅವರಿಗೆ ಮರಿಗೌಡ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ಸಲ್ಲಿಕೆಗೂ ಮುನ್ನ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದರು.

ಮುಡಾದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಪ್ರಕರಣದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವಾದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಾಗಿದೆ. ಯಾವುದೇ ಒತ್ತಡವಿಲ್ಲ: ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮರಿಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಮುಡಾ ಅಧ್ಯಕ್ಷ ಸ್ಥಾನದ ರಾಜೀನಾಮೆ ಕೊಟ್ಟಿದ್ದೇನೆ. ಮುಖ್ಯಮಂತ್ರಿ ಸೂಚನೆ ಹಾಗೂ ನನ್ನ ಆರೋಗ್ಯ ಸರಿಯಿಲ್ಲದ ಕಾರಣದಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದರು.
ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮುಡಾದಲ್ಲಿ ಅಕ್ರಮ ಆಗಿದೆ ಅಥವಾ ಇಲ್ಲವೆಂದು ನಾನು ಹೇಳುವುದಿಲ್ಲ. ತನಿಖೆಯಿಂದ ಸತ್ಯ ಹೊರಬರುತ್ತದೆ. ನನ್ನ ಮೇಲೆ ಯಾವುದೇ ರೀತಿಯ ಒತ್ತಡ ಇಲ್ಲ. ನಿವೇಶನದ ವಿಚಾರವಾಗಿ ಮುಖ್ಯಮಂತ್ರಿ ಯಾವುದೇ ಒತ್ತಡವನ್ನು ನನ್ನ ಮೇಲೆ ಹಾಕಿಲ್ಲ. ಸಿದ್ದರಾಮಯ್ಯ ನಮ ನಾಯಕರಾಗಿದ್ದು, ಅವರೋಂದಿಗೆ 40 ವರ್ಷಗಳಿಂದ ಜೊತೆಯಲ್ಲಿದ್ದೇನೆ ಎಂದು ಅವರು ತಿಳಿಸಿದರು.
ನನ್ನನ್ನು ತಾಲೂಕು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಮಾಡಿದ್ದರು. ಯಾವತ್ತು ಕೂಡಾ ಸಿದ್ದರಾಮಯ್ಯ ಅವರು ಅಕ್ರಮ ಮಾಡುವಂತೆ ಹೇಳಿಲ್ಲ. ಮುಡಾ ವಿಚಾರದಲ್ಲೂ ಮುಖ್ಯಮಂತ್ರಿ ಒತ್ತಡ ಹಾಕಿಲ್ಲ ಎಂದರು.

Leave a Reply

Your email address will not be published. Required fields are marked *

error: Content is protected !!