ಉದಯವಾಹಿನಿ, ರಾಮನಗರ: ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಮಳೆಯು ಬೆಳೆಗಳಿಗೆ ಜೀವಕಳೆ ತಂದಿದೆ. ಮಳೆ ಇಲ್ಲದೆ ಬೆಳೆ ಒಣಗುತ್ತಿವೆ ಎಂದು ಚಿಂತಾಕ್ರಾಂತರಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲವೊಮ್ಮೆ ಗುಡುಗು ಸಹಿತ ಧಾರಾಕಾರವಾಗಿ ಹಾಗೂ ನಂತರ ಸಾಧಾರಣವಾಗಿ ಸುರಿಯುತ್ತಿರುವ ಮಳೆ ಬಿಸಿಲ ಬೇಗೆಯನ್ನು ಸಹ ತಣಿಸಿದೆ.
ಸಂಜೆ ಹಾಗೂ ರಾತ್ರಿ ಎನ್ನದೆ ಆಗಾಗ ಬಿಡುವು ಕೊಟ್ಟು ಸುರಿಯುತ್ತಿರುವ ಮಳೆ ಒಟ್ಟಿನಲ್ಲಿ ರೈತರಿಗೆ ಸಮಾಧಾನ ತಂದಿದೆ. ಒಣಗಿದ್ದ ರಾಗಿ ಬೆಳೆ ಹಸಿರಿನಿಂದ ಕಂಗೊಳಿಸುತ್ತಿದೆ. ರೇಷ್ಮೆ, ತೆಂಗು, ಮಾವು ಸೇರಿದಂತೆ ಇತರ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಮಳೆಯಿಂದಾಗಿ ಚೇತರಿಸಿಕೊಂಡಿವೆ. ಆರೆಂಜ್ ಅಲರ್ಟ್: ಮಳೆಯಿಂದಾಗಿ ಜಿಲ್ಲೆಯಲ್ಲಿ ಹರಿಯುವ ಅರ್ಕಾವತಿ, ಕಣ್ವ ಸೇರಿದಂತೆ ವಿವಿಧ ನದಿಗಳಲ್ಲಿ ನೀರಿನ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ನೀರಿಲ್ಲದೆ ಕಳೆಗುಂದಿದ್ದ ಕೆರೆ-ಕಟ್ಟೆಗಳಿಗೆ ಕಳೆ ಬಂದಿದೆ. ರಾಮನಗರ ಜಿಲ್ಲೆ ಸೇರಿದಂತೆ ಪಕ್ಕದ ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ ಸೇರಿದಂತೆ ಕೆಲ ಜಿಲ್ಲೆಯಗಳಲ್ಲಿ ಅ. 18ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.
‘ಈ ಸಲವೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆ ಸುರಿದಿಲ್ಲ. ಹಾಗಾಗಿ, ಕೆರೆ-ಕಟ್ಟೆಗಳು ಒಣಗಿವೆ. ನದಿಗಳು ಸಹ ಹೇಳಿಕೊಳ್ಳುವಷ್ಟು ಮೈದುಂಬಿಲ್ಲ. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಿರೀಕ್ಷಿತ ಮಳೆ ಸುರಿಯಲಿಲ್ಲ. ಬಿಸಿಲ ಬೇಗೆಗೆ ರಾಗಿ ಪೈರುಗಳು ಒಣಗಿದ್ದವು. ಕಡೆಗೂ ಮಳೆರಾಯ ರೈತರ ಕೂಗು ಕೇಳಿಸಿಕೊಂಡಿದ್ದಾನೆ ಎನ್ನಿಸುತ್ತದೆ. ಇಂದು ಸುರಿದ ಮಳೆಯು ರಾಗಿ ಸೇರಿದಂತೆ ವಿವಿಧ ಬೆಳೆಗಳಿಗೆ ವರವಾಗಿದೆ’ಎಂದು ಪಾಲಾಬೋವಿದೊಡ್ಡಿಯ ರೈತ ಆದೀಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.ಮಳೆಯಿಂದಾಗಿ ಜಿಲ್ಲೆಯಲ್ಲಿ ಯಾವುದೇ ಹಾನಿಯಾಗಿರುವ ಕುರಿತು ವರದಿಯಾಗಿಲ್ಲ.
