ಉದಯವಾಹಿನಿ,ಬೆಂಗಳೂರು: ತುಮಕೂರು ಭಾಗದಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದರಿಂದ ಅನುಕೂಲವಾಗಲಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆಲಮಂಗಲ-ಕುಣಿಗಲ್ ಮಾರ್ಗದಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಪ್ರಸ್ತಾವನೆಯ ಬಗ್ಗೆ ಪ್ರತಿಕ್ರಿಯಿಸಿದರು.
ತುಮಕೂರು-ದಾಬಸ್ಪೇಟೆ ನಡುವೆ ವಿಮಾನ ನಿಲ್ದಾಣ ನಿರ್ಮಾಣ ಸೂಕ್ತ ಎಂಬ ಚರ್ಚೆಗಳು ಇವೆ. ಆದರೆ ತಾಂತ್ರಿಕವಾಗಿ ನೆಲಮಂಗಲ-ಕುಣಿಗಲ್ ರಸ್ತೆಯನ್ನು ಆದ್ಯತೆಯನ್ನಾಗಿ ಪರಿಗಣಿಸಲಾಗುತ್ತದೆ ಎಂಬ ಮಾಹಿತಿ ಇದೆ ಎಂದರು.ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ಹಬ್ನ್ನು ತುಮಕೂರಿನಲ್ಲಿ ನಿರ್ಮಿಸಲಾಗಿದೆ. 20 ಸಾವಿರ ಎಕರೆಯಲ್ಲಿ ಕೈಗಾರಿಕಾ ವಸಾಹತು ನಿರ್ಮಾಣವಾಗುತ್ತಿದ್ದು, ಮೊದಲ ಮತ್ತು 2ನೇ ಹಂತದ ಕೆಲಸ ಮುಗಿದಿದೆ. 150ಕ್ಕೂ ಹೆಚ್ಚು ಕೈಗಾರಿಕೆಗಳು ನೆಲಗೊಂಡಿವೆ.
ಟೌನ್ಶಿಪ್ ನಿರ್ಮಾಣಗೊಂಡಿದೆ. ಎಚ್ಎಎಲ್ನ ಹೆಲಿಕಾಪ್ಟರ್ ಉತ್ಪಾದನಾ ಘಟಕ ಸ್ಥಾಪನೆಯಾಗಿದೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ತುಮಕೂರು ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಸೂಕ್ತ ಎಂಬುದು ನಮ ವಾದ ಎಂದು ಹೇಳಿದರು.
ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದಂತೆ ತುಮಕೂರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಸಾಧ್ಯತೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ತುಮಕೂರು ಗ್ರೇಟರ್ ಬೆಂಗಳೂರಿನ ಭಾಗವಾಗಿದೆ. ನೆಲಮಂಗಲದವರೆಗೂ ಮಹಾನಗರಿ ವಿಸ್ತರಣೆಯಾಗಿದೆ. ಗ್ರೇಟರ್ ಬೆಂಗಳೂರಿನ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು. ಜಾತಿ ಗಣತಿ ವಿಚಾರವಾಗಿ ಶಾಮನೂರು ಶಿವಶಂಕರಪ್ಪ ಅವರ ಸಮಸ್ಯೆ ಏನು ಎಂದು ನನಗೆ ಗೊತ್ತಿಲ್ಲ. 160 ಕೋಟಿ ರೂ. ಖರ್ಚು ಮಾಡಿ ಸಮೀಕ್ಷೆ ನಡೆಸಲಾಗಿದೆ. ಅದರ ಮಾಹಿತಿ ಏನು ಎಂದು ಜನರಿಗೆ ಗೊತ್ತಾಗಬೇಕು. ಅದಕ್ಕಾಗಿ ಸಂಪುಟದಲ್ಲಿ ಜಾತಿಗಣತಿ ಮಂಡಿಸುತ್ತೇವೆಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದರು.
