ಉದಯವಾಹಿನಿ, ಬೆಂಗಳೂರು: ಚುನಾವಣಾ ಫಲಿತಾಂಶ ಪ್ರಕಟವಾಗಿ ಹದಿನೈದು ದಿನಗಳ ಒಳಗೆ ಪೂರ್ಣ ಪ್ರಮಾಣದ ಸರ್ಕಾರವನ್ನು ಅಸ್ತಿತ್ವಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರಿಗೂ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೆ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸೂಚಿಸಿದ್ದಾರೆ.ಒಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ನಾವು ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಿಗೆ ಉಡುಗೊರೆ ನೀಡಬೇಕು. ಈ ಗುರಿ ಇಟ್ಟುಕೊಂಡು ಶ್ರದ್ದೆ, ಪ್ರಾಮಾಣಿಕತೆ ಹಾಗೂ ಚುರುಕಾಗಿ ಜವಾಬ್ದಾರಿ ನಿರ್ವಹಿಸಿ ಎಂದು ಎಲ್ಲಾ ಸಚಿವರಿಗೂ ಮನವರಿಕೆ ಮಾಡಿಸಿದ್ದಾರೆ.
