ಉದಯವಾಹಿನಿ, ಕನಕಪುರ: ಮದುವೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ಉರುಳಿಬಿದ್ದು ಸುಮಾರು 20 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹೆಗನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ.
ಸಾತನೂರು ಬಳಿಯ ಉಯ್ಯಬ್ಬಳ್ಳಿ ಹೋಬಳಿ ತಗಡೆಗೌಡನ ದೊಡ್ಡಿ ಗ್ರಾಮದ ಸುಮಾರು 60 ಮಂದಿ ಸಂಗಮದ ಬಳಿ ಇರುವ ಶಿವ ಶರಣೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ವಧು-ವರ ಮತ್ತು ಕೆಲವರು ಕಾರಿನಲ್ಲಿ ತೆರಳಿದರೆ ಸುಮಾರು 60 ಮಂದಿ ಬಸ್‌ನಲ್ಲಿ ಅಲ್ಲಿಗೆ ಹೋಗುತ್ತಿದ್ದರು. ಬೆಳಗ್ಗೆ 9.20ರ ಸಂದರ್ಭದಲ್ಲಿ ರಸ್ತೆ ತಿರುವಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿಬಿದಿದ್ದೆ.

ಕೆಲವರು ಕೂಗಿಕೊಂಡಿದ್ದಾರೆ. ಹಿಂದೆ ಬೈಕ್‌ನಲ್ಲಿ ಬರುತ್ತಿದ್ದ ಕೆಲವರು ಬಸ್‌ನಲ್ಲಿ ಸಿಕ್ಕಿಕೊಂಡಿದ್ದ ಕೆಲವರನ್ನು ರಕ್ಷಿಸಿದ್ದಾರೆ. ಇನ್ನೂ ಬಸ್‌ನಲ್ಲಿದ್ದ ಸೋಮಣ್ಣ ಎಂಬುವರು ಗಾಜುಗಳನ್ನು ಒಡೆದು ಕೆಲವರನ್ನು ಹೊರಗೆ ಕಳುಹಿಸಿ ಅವರ ಜೀವ ಉಳಿಸಿದ್ದಾರೆ. ತಗಡೆಗೌಡನ ದೊಡ್ಡಿಯ ಶಿವಿರಮ್ಮ, ಕಮಲಮ್ಮ, ಜ್ಯೋತಿ, ಶಿವಣ್ಣ ಸೇರಿದಂತೆ ಇಬ್ಬರು ಮಕ್ಕಳಿಗೆ ಗಂಭೀರಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಥಳಕ್ಕೆ ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿದಂತೆ ಹಲವರು ಭೇಟಿ ನೀಡಿ ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ ಮತ್ತು ಅವರ ಆರೋಗ್ಯ ವಿಚಾರಿಸಿದ್ದಾರೆ. ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಘಟನೆಗೆ ಬಸ್ ಚಾಲಕನ ಅಜಾಗರೂಕತೆಯೇ ಕಾರಣ ಎಂದುಹೇಳಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!