ಉದಯವಾಹಿನಿ, ಮಂಗಳೂರು: ಈ ರಸ್ತೆಯಲ್ಲಿ ಸಾಗುವ ಪಾದಚಾರಿಗಳಿಗೆ ಬೇಸಿಗೆಯಲ್ಲಿ ದೂಳಿನ ಮಜ್ಜನ, ಮಳೆ ಬಂದರೆ ಕೆಸರಿನ ಸಿಂಚನ, ಡಾಂಬರ್ ಕಿತ್ತು ಹೋಗಿ ರಸ್ತೆ ತುಂಬ ಹರಡಿರುವ ಜಲ್ಲಿಕಲ್ಲುಗಳು. ಕಾರಿನಲ್ಲಿ ಹೋಗುವವರು ಹೊಂಡ-ಗುಂಡಿಯಲ್ಲಿ ವಾಹನವನ್ನು ಇಳಿಸಿ ಜಾಗ್ರತೆಯಿಂದ ಮುಂದಕ್ಕೆ ಸಾಗಬೇಕು.ದ್ವಿಚಕ್ರ ವಾಹನ ಸವಾರರಂತೂ ಸ್ವಲ್ಪ ಎಚ್ಚರ ತಪ್ಪಿದರೂ ವಾಹನ ಪಲ್ಟಿಯಾಗುವ ಅಪಾಯ.. ಇದು ಮಹಾನಗರ ಪಾಲಿಕೆ ವ್ಯಾಪ್ತಿಯ ಅಶೋಕನಗರಕ್ಕೆ ತೆರಳುವ ರಸ್ತೆಯ ದುಃಸ್ಥಿತಿ. ಇದೇ ಮಾರ್ಗದಲ್ಲಿ ದೈವಸ್ಥಾನ ಇದೆ, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಇದೆ. ಉರ್ವ ಮಾರಿಯಮ್ಮ ಗುಡಿಗೆ ತೆರಳುವವರೂ ಇದೇ ಮಾರ್ಗದಲ್ಲಿ ಹೋಗುತ್ತಾರೆ. ಅಶೋಕನಗರ, ಶೇಡಿಗುರಿಗೆ ತಲುಪುವ ಈ ರಸ್ತೆಯಲ್ಲಿ ದಿನವಿಡೀ ವಾಹನ ದಟ್ಟಣೆ ಇರುತ್ತದೆ. ರಸ್ತೆಯ ಅಕ್ಕಪಕ್ಕದಲ್ಲಿ ಪಾರ್ಟ್‌ಮೆಂಟ್‌ಗಳು, ಮನೆಗಳು ಇವೆ. ಆದರೂ, ಹೊಂಡ ಬಿದ್ದಿರುವ ರಸ್ತೆಯ ಮರು ನಿರ್ಮಾಣ ಅಥವಾ ಶಾಶ್ವತ ದುರಸ್ತಿ ಕೆಲಸ ಆಗುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ದೂರು.ಒಂದು ವರ್ಷದಿಂದ ಈ ರಸ್ತೆ ಇದೇ ಸ್ಥಿತಿಯಲ್ಲಿದೆ. ಒಂದೆರಡು ಬಾರಿ ಗುಂಡಿ ಮುಚ್ಚುವ ಕೆಲಸ ನಡೆದಿತ್ತು. ಆದರೆ, ದುರಸ್ತಿ ಮಾಡಿದ ಕೆಲವೇ ದಿನಗಳಲ್ಲಿ ಯಾವುದಾದರೂ ಕಾಮಗಾರಿಯ ನೆಪದಲ್ಲಿ ಮತ್ತೆ ಅಗೆದು ಹಾಕುತ್ತಾರೆ. ರಸ್ತೆ ಪಕ್ಕದಲ್ಲಿ ಚರಂಡಿಯೂ ಸಮರ್ಪಕವಾಗಿಲ್ಲ ಎನ್ನುತ್ತಾರೆ ರಸ್ತೆಯ ಬದಿಯ ವ್ಯಾಪಾರಿ ರಾಮ್ ಕುಮಾರ್.
