ಉದಯವಾಹಿನಿ,ಬೆಂಗಳೂರು: ರಾಜಕೀಯವನ್ನೇ ಉಂಡೆದ್ದು ಮಲಗಿ, ಸೇಡಿನ ರಾಜಕೀಯಕ್ಕೆ ಹೆಸರುವಾಸಿ ಯಾಗಿರುವ ಒಕ್ಕಲಿಗರ ಭಧ್ರಕೋಟೆ ರಾಮನಗರ ಜಿಲ್ಲೆಯ ಬೊಂಬೆನಾಡಿನ ಖ್ಯಾತಿಯ ಚನ್ನಪಟ್ಟಣ ಇದೀಗ ಬದಲಾದ ಪರಿಸ್ಥಿತಿಯಲ್ಲಿ ಮತ್ತೊಮೆ ಮೂರನೇ ಬಾರಿ ಉಪಚುನಾವಣೆ ಎದುರಾಗಿದೆ.ಈ ಹಿಂದೆ ನಡೆದಿದ್ದ ಎರಡು ಉಪಚುನಾಣೆಯಲ್ಲಿ ಒಮೆ ಜೆಡಿಎಸ್ ಹಾಗೂ ಮತ್ತೊಮೆ ಬಿಜೆಪಿ ಜಯಿಸಿತ್ತು. ಆದರೆ, ಈ ಬಾರಿ ಎನ್ಡಿಎ ಮೈತ್ರಿ ಹಿನ್ನೆಲೆಯಲ್ಲಿ ಈ ಎರಡೂ ಪಕ್ಷಗಳೇ ಕ್ಷೇತ್ರದ ಟಿಕೆಟ್ಗಾಗಿ ಪರಸ್ಪರ ಪೈಪೋಟಿ ನಡೆಸುವ ಪರಿಸ್ಥಿತಿ ಎದುರಾಗಿದೆ.
ಮಂಡ್ಯ ಲೋಕಸಭಾ ಚುನಾವಣೆಯ ಗೆಲುವು ಸಾಧಿಸಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ 3ನೇ ಬಾರಿ ಉಪಚುನಾವಣೆ ಎದುರಾಗಿದೆ. ಮೊದಲ ಎರಡು ಉಪಚುನಾವಣೆಯಲ್ಲಿ ಎದುರಾಳಿ ಪಕ್ಷಗಳಾಗಿ ಸೆಣಸಾಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳಾಗಿದ್ದು, ಟಿಕೆಟ್ ಬಿಕ್ಕಟ್ಟು ಎದುರಾಗಿದೆ.
ಜೆಡಿಎಸ್ ಗೆಲುವು ಸಾಧಿಸಿದ್ದ ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಳ್ಳಬೇಕು ಎಂಬ ಇರಾದೆ ಕುಮಾರಸ್ವಾಮಿ ಅವರದ್ದಾದರೆ, ಕ್ಷೇತ್ರದಲ್ಲಿ ತಮದೇ ಆದ ಪ್ರಾಬಲ್ಯ ಹೊಂದಿರುವ ಯೋಗೇಶ್ವರ್ ಕ್ಷೇತ್ರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂದು ಹರಸಾಹಸ ಪಡುತ್ತಿದ್ದಾರೆ. ವಿಧಾನಪರಷತ್ ಸದಸ್ವತ್ವಕ್ಕೆ ರಾಜೀನಾಮೆ ನೀಡಿರುವ ಅಭಿಮಾನಿಗಳ ಪಾಲಿನ ಸೈನಿಕನ ನಡೆಯನ್ನು ಕ್ಷೇತ್ರದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಈ ಹಿಂದೆ 2009, 2011ರಲ್ಲಿ ಎರಡು ಬಾರಿ ಉಪ ಚುನಾವಣೆ ಎದುರಾಗಿತ್ತು. 2009ರ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, 2011ರಲ್ಲಿ ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಂಡಿತ್ತು. 2008 ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದು ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ 2009ರಲ್ಲಿ ಆಪರೇಷನ್ ಕಮಲಕ್ಕೆ ಒಳಗಾಗಿ ತಮ ಶಾಸಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಬಳಿಕ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿ ಯೋಗೇಶ್ವರ್ ಸೋಲು ಅನುಭವಿಸಿದ್ದರು..
