ಉದಯವಾಹಿನಿ, ಹಾನಗಲ್: ಹಿಂಗಾರು ಮಳೆಯ ಅಬ್ಬರಕ್ಕೆ ತಾಲ್ಲೂಕಿನಲ್ಲಿ ಹಳ್ಳ, ಕೆರೆಗಳು ತುಂಬಿ ಹರಿಯುತ್ತಿದ್ದು, ಅಲ್ಲಲ್ಲಿ ರಸ್ತೆ ಸಂಚಾರ ಸ್ಥಗಿತವಾಗುತ್ತಿವೆ. ತಗ್ಗು ಪ್ರದೇಶದ ಜನವಸತಿ ಭಾಗಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಮಳೆಗೆ ತಾಲ್ಲೂಕಿನ ಕಿರವಾಡಿ-ತಿಳವಳ್ಳಿ, ಹೇರೂರ-ದಿಡಗೂರ ರಸ್ತೆಗಳಲ್ಲಿ ಹಳ್ಳದ ನೀರು ಹರಿಯುತ್ತಿದೆ.
ವರದಾ ನದಿ ಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗಿ ಕೂಡಲ-ನಾಗನೂರ ಸಂಪರ್ಕ ಬಂದ್ ಆಗಿದೆ.
ಕಂಚಿನೆಗಳೂರ ಗ್ರಾಮದಲ್ಲಿ ಕೆರೆ ನೀರು ಮನೆಗಳಿಗೆ ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವೆಡೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನೀರಿನಲ್ಲಿ ನಿಂತಿವೆ. 9 ಮನೆಗೆ ಹಾನಿಯಾಗಿದೆ. ಹೆಚ್ಚು ಮಳೆ ಬಾಧಿತ ಭಾಗದಲ್ಲಿ ಬೆಳೆಗಳು ನೀರು ಪಾಲಾಗಿವೆ. ಬೆಳೆ ನಷ್ಟದ ವರದಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ ಎಂದು ತಹಶೀಲ್ದಾರ್ ರೇಣುಕಾ ಎಸ್ ತಿಳಿಸಿದ್ದಾರೆ. ಕುಮಾರೇಶ್ವರ ನಗರ ಕೆರೆಯಂತಾಗಿತ್ತು. ರಸ್ತೆಯ ಮೇಲೆ ಮೊಣಕಾಲುವರೆಗೂ ನೀರು ಆವರಿಸಿಕೊಂಡಿತ್ತು. ಮನೆಗಳಲ್ಲಿ ನೀರು ನುಗ್ಗಿ ತೊಂದರೆಯಾಗಿದೆ ಇದು ಪ್ರತಿ ವರ್ಷದ ಗೋಳು. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕು ಎಂದು ಕುಮಾರ ಹತ್ತಿಕಾಳ ಒತ್ತಾಯಿಸಿದರು.
ನವನಗರ ಭಾಗದಲ್ಲಿ ಕೆರೆಯ ನೀರು ಸುತ್ತಲಿನ ಮನೆಗಳಿಗೆ ಹರಡಿ ನಿವಾಸಿಗಳಿಗೆ ಸಮಸ್ಯೆಯಾಗಿತ್ತು. ಮನೆಯಿಂದ ನೀರು ಹೊರಹಾಕಲು ಹರಸಾಹಸಪಟ್ಟರು. ಶಿಬಾರ ಓಣಿಯಲ್ಲಿ ಸುಮಾರು 20 ಮನೆಗಳಿಗೆ ಕೆರೆ ನೀರು ನುಗ್ಗಿದೆ. ಕೆರೆಯ ನೀರು ಸರಾಗವಾಗಿ ಹರಿದುಹೋಗಲು ಕಾಲುವೆ ನಿರ್ಮಾಣ ಮಾಡಬೇಕು ಎಂದು ನಿವಾಸಿ ಮಂಜುನಾಥ ಪೂಜಾರ ಆಗ್ರಹಿಸಿದರು.
