ಉದಯವಾಹಿನಿ, ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಾಲಯದ ಬಾಗಿಲನ್ನು ನಾಳೆಯಿಂದ ನವೆಂಬರ್ 3ರವರೆಗೆ ತೆರೆದಿರುತ್ತದೆ. ಹಾಸನಾಂಬ ದೇವಾಲಯಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರತಿ ವರ್ಷ 9-12 ದಿನ ಮಾತ್ರ ದರ್ಶನ ನೀಡುವ ಪ್ರತೀತಿ ಹೊಂದಿರುವ ಹಾಸನಾಂಬ ದೇವಿ ನಾಡಿನಲ್ಲೆ ವಿಶೇಷ ಎನ್ನಬಹುದು.
ಹಾಸನ ನಗರದ ಅನುಪಮ ಪ್ರಭಾವದ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಗ್ರಾಮದೇವತೆ ಹಾಸನಾಂಬ ದೇವಿಯ ಸ್ಥಳ ಮಹಾತ್ಮೆ. ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಃ ಗರೀಯಃ -ಅಂದರೆ ಜನನಿ ಮಾತೆ ಹಾಗು ಜನ್ಮ ಭೂಮಿ ಇರುವೆಡೆಯೆ ಸ್ವರ್ಗವಿದೆ ಎಂದರ್ಥ ಈ ಭರತ ಖಂಡದಲ್ಲಿ ಕೋಟ್ಯಾನು ಕೋಟಿ ದೇವತೆಗಳಿದ್ದರೂ ಮಾತೃದೇವತೆಯನ್ನೇ ಎಲ್ಲಕ್ಕಿಂತಾ ಮೊದಲ ಗೌರವ ನೀಡುತ್ತೇವೆ.
ಸುಮಾರು 12ನೇ ಶತಮಾನದಲ್ಲಿ ಕೃಷ್ಣಪ್ಪನಾಯಕನೆಂಬ ಪಾಳೇಗಾರನ ಕಾಲದಲ್ಲಿ ಸ್ಥಾಪಿತವಾಗಿರುವ ಈ ದೇವಾಲಯದಲ್ಲಿ ಹಾಸನಾಂಬ ದೇವಿಯು ಹುತ್ತದ ರೂಪದಲ್ಲಿ ನೆಲಸಿದ್ದಾಳೆ. ಸುಂದರ ಶಿಲ್ಪ ಕಲೆಗಳಿಗೆ ಹೆಸಾರದ ಬೇಲೂರು, ಹಳೇಬೀಡು, ಶ್ರವಣಬೆಳಗೂಳಗಳನ್ನು ಒಳಗೂಂಡಿರುವ ಹಾಸನ ಜಿಲ್ಲೆಯ ಈ ದೇವಾಲಯದಲ್ಲಿ ಆ ರೀತಿಯ ವಿಶೇಷವಾದ ಶಿಲ್ಪಕಲಾ ವೈಭವವೇನೂ ಇಲ್ಲದಿದ್ದರೂ ದೇವಿಯ ಆರಾಧಕರೂ ನೂರಾರು ಸಂಖ್ಯೆಯಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ.
ದೇವಿಯ ಮಹಿಮೆಯನ್ನು ಅಪಾರವಾಗಿ ನಂಬುವ ಭಕ್ತ ಸಮೂಹವಿಲ್ಲಿದ್ದು, ನಂಬಿಕೆ, ಭಕ್ತಿ, ಮಹಿಮೆಗಳೆ ಇಲ್ಲಿನ ವೈಶಿಷ್ಟ್ಯವಾಗಿದೆ. ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡಲಾಗುವ ನೈವೇಧ್ಯವು ಮತ್ತೇ ಮುಂದಿನ ವರ್ಷ ಇದೇ ಸಮಯದಲ್ಲಿ ಬಾಗಿಲು ತೆರೆದಾಗ ತಾಜಾ ಆಗಿ ಹಾಗೂ ದೇವರ ಎದುರಿನಲ್ಲಿರುವ ದೀಪವು ವರ್ಷವೀಡಿ ಉರಿಯುತ್ತಲೇ ಇರುತ್ತದೆ ಎಂಬ ಪ್ರತೀತಿ ಇದೆ.
ಹೊಯ್ಸಳರ ಕಾಲದ ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬ ದೇವಿಯನ್ನು ಭಕ್ತರು ಎಲ್ಲಾ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೂಮ್ಮೇ ಅಶ್ಬೀಜಮಾಸ ಪೊರ್ಣಿಮೆ ನಂತರ ಬರುವ ಗುರುವಾರದಂದು ಬಾಗಿಲು ತೆರೆದರೆ ಅನಂತರ ಬಲಿಪಾಡ್ಯಮಿ ಮಾರನೆ ದಿನ ಬಾಗಿಲು ಮುಚ್ಚುವುದು. ಪುನಃ ಒಂದು ವರ್ಷದ ಕಾಲ ದೇವಿಯ ದರ್ಶನ ಸಿಗುವುದಿಲ್ಲ.
