ಉದಯವಾಹಿನಿ, ಕಾರ್ಕಳ: ಪ್ರಿಯಕರನೊಂದಿಗೆ ಸೇರಿ ಪತಿಗೆ ವಿಷವುಣಿಸಿ, ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ ಹಾಗೂ ಪ್ರಿಯಕರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ತಾಲ್ಲೂಕಿನ ಮರ್ಣೆ ಗ್ರಾಮದ ಅಜೆಕಾರಿನ ದೆಪ್ಪುತ್ತೆಯ ಬಾಲಕೃಷ್ಣ ಪೂಜಾರಿ (44) ಕೊಲೆಯಾದವರು.
ಅವರ ಪತ್ನಿ ಪ್ರತಿಮಾ ಹಾಗೂ ಪ್ರಿಯಕರ ದಿಲೀಪ್‌ ಹೆಗ್ಡೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಮಾ ಹಾಗೂ ಬಾಲಕೃಷ್ಣ ದಂಪತಿಯ ರೀಲ್ಸ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದವು.
ಪ್ರತಿಮಾ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ದಿಲೀಪ್ ಹೆಗ್ಡೆ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಎರಡು ತಿಂಗಳ ಹಿಂದೆ ಪ್ರತಿಮಾ ಹಾಗೂ ದಿಲೀಪ್ ನಡುವಿನ ಪ್ರೇಮದ ವಿಷಯದಲ್ಲಿ ಬಾಲಕೃಷ್ಣ ಪೂಜಾರಿ ಅಜೆಕಾರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅದರಂತೆ ದಿಲೀಪ್ ಹಾಗೂ ಪ್ರತಿಮಾ ಅವರನ್ನು ಕರೆಸಿ ವಿಚಾರಣೆ ನಡೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರು.
ಬಾಲಕೃಷ್ಣ ಪೂಜಾರಿ ಅವರಿಗೆ 25 ದಿನಗಳಿಂದ ಜ್ವರ ಮತ್ತು ವಾಂತಿ ಆರಂಭವಾಗಿತ್ತು. ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಅವರಿಗೆ ಕಾಮಾಲೆ ರೋಗವಿದೆ ಎಂದು ತಿಳಿಸಿದ್ದರು. ತಕ್ಷಣ ಅವರಿಗೆ ಮಣಿಪಾಲದ ಖಾಸಗಿ ಆಸ್ಪತ್ರೆ, ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ ಬಳಿಕ ಬೆಂಗಳೂರಿನ ನಿಮ್ಹಾನ್ಸ್‌, ವಿಕ್ಟೋರಿಯಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನು ಅ.19ರಂದು ರಾತ್ರಿ ಮನೆಗೆ ಕರೆತರಲಾಗಿತ್ತು. 20ರಂದು ನಸುಕಿನ ವೇಳೆ ಬಾಲಕೃಷ್ಣ ಅವರು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!