ಉದಯವಾಹಿನಿ, ನವದೆಹಲಿ: ಬಹುನಿರೀಕ್ಷಿತ ದೇಶದ ಜನಸಂಖ್ಯೆಯ ಅಧಿಕೃತ ಸಮೀಕ್ಷೆ ಯಾದ ಜನಗಣತಿಯನ್ನು ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ 2025ರಲ್ಲಿ ಆರಂಭಿಸುವ ನಿರೀಕ್ಷೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆಯಾಗಬೇಕೆಂಬ ಬೇಡಿಕೆ ಕೇಳಿಬಂದ ಹಿನ್ನಲೆಯಲ್ಲಿ 2025ರಿಂದ 26ರವರೆಗೆ ಅಂದರೆ ಒಂದು ವರ್ಷ ದೇಶಾದ್ಯಂತ ಜನಗಣತಿಯನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ.
ನಿಯಮಗಳ ಪ್ರಕಾರ ಪ್ರತಿ 10 ವರ್ಷಕ್ಕೊಮೆ ಕೇಂದ್ರ ಸರ್ಕಾರ ಅಧಿಕೃತವಾಗಿ ಜನಗಣತಿಯನ್ನು ನಡೆಸುವುದು ಈವರೆಗೂ ನಡೆದುಕೊಂಡು ಬಂದ ಸಂಪ್ರದಾಯವಾಗಿತ್ತು. ಆದರೆ ದೇಶದಲ್ಲಿ ಕೋವಿಡ್ ಮಹಾಮಾರಿ ಕಾಣಿಸಿಕೊಂಡಿದ್ದರಿಂದ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.
ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ ವಿಂಗಡನೆ ಆಗಲಿದ್ದು ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿದೆ. ಲೋಕಸಭಾ ಪುನರ್ ವಿಂಗಡನೆಯೊಂದಿಗೆ ಮಹಿಳಾ ಮೀಸಲಾತಿ ಸಹ ಜಾರಿಗೆ ಬರಲಿದೆ.
