ಉದಯವಾಹಿನಿ, ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಹರಿದು ಬರುತ್ತಿದ್ದು, ಪ್ರತಿಯೊಂದು ಸರದಿ ಸಾಲಿನಲ್ಲೂ ಕಿ.ಮೀ.ಗಟ್ಟಲೆ ಜನರು ನಿಂತಿರುವುದು ಸಾಮಾನ್ಯವಾಗಿತ್ತು.ಸಾರ್ವಜನಿಕ ದರ್ಶನದ ನಾಲ್ಕನೇ ದಿನವಾದ ಸೋಮವಾರ ಭಾರಿ ಸಂಖ್ಯೆಯಲ್ಲಿ ಭಕ್ತ ಸಾಗರವೇ ಹರಿದು ಬಂದಿತ್ತು.ತಡರಾತ್ರಿಯಿಂದಲೂ ಸರತಿ ಸಾಲಿನಲ್ಲಿ ನಿಂತ ಸಾವಿರಾರು ಭಕ್ತರು ದರ್ಶನ ಪಡೆದರು. ವಿವಿಐಪಿ, ವಿಐಪಿ, ಸಾಮಾನ್ಯ ದರ್ಶನದ ಸಾಲುಗಳು ಸಂಪೂರ್ಣ ಭರ್ತಿಯಾಗಿದ್ದವು.ಸಾಮಾನ್ಯ ಸರತಿಯಲ್ಲಿ ಸಾಗುತ್ತಿರುವ ಜನರು ದೇವಿಯ ದರ್ಶನ ಪಡೆಯಲು 6-7 ಗಂಟೆ ಸಾಗಿ ಬರಬೇಕಿದೆ. ₹1ಸಾವಿರ ಮೌಲ್ಯದ ಟಿಕೆಟ್‌ಗೆ 2-3 ಗಂಟೆ ಹಾಗೂ ವಿವಿಐಪಿ ಪಾಸ್ ಪಡೆದವರು ಸಹ ಗಂಟೆಗಟ್ಟಲೆ ಸರತಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುವುದು ಅನಿವಾರ್ಯವಾಗಿತ್ತು. ಮಹಿಳೆಯರು, ವೃದ್ದರು, ಮಕ್ಕಳು ಸರದಿಯಲ್ಲಿ ನಿಂತು ಸುಸ್ತಾಗುತ್ತಿರುವುದು ಕಂಡು ಬಂತು.ದರ್ಶನ ಪಡೆದ ಸಚಿವ ಸೋಮಣ್ಣ: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಕುಟುಂಬ ಸಮೇತರಾಗಿ ಬಂದು ಹಾಸನಾಂಬ ದೇವಿ ದರ್ಶನ ಪಡೆದರು.ನಂತರ ಮಾತನಾಡಿದ ಅವರು, ಸಾವಿರಾರು ವರ್ಷದ ಇತಿಹಾಸವಿರುವ ಹಾಸನಾಂಬೆ ದೇವಾಲಯವಿದು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಲ್ಲವನಾಗಿದ್ದೇನೆ. ನನ್ನ ಅನುಭವದಲ್ಲಿ ಈ ಬಾರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವಿ ದರ್ಶನಕ್ಕೆ ಅತ್ಯುತ್ತಮ ವ್ಯವಸ್ಥೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಾನು ಸತತವಾಗಿ 2-3 ಬಾರಿ ದೇವಿ ದರ್ಶನ ಮಾಡಿದ್ದೇನೆ. ಭಾನುವಾರ ಒಂದೇ ದಿನ ಲಕ್ಷಾಂತರ ಜನ ದರ್ಶನ ಪಡೆದಿದ್ದಾರೆ. ಹಾಸನಾಂಬೆ ದೇವಿ ವಿಶ್ವ ಖ್ಯಾತಿ ಗಳಿಸಿದ್ದು, ತಾಯಿಯ ಪವಾಡಗಳು, ಈ ಭಾಗಕ್ಕೆ, ತನ್ನನ್ನು ನಂಬಿರುವ ಭಕ್ತರಿಗೆ ಕೊಡುಗೆಗಳನ್ನು ಕೊಟ್ಟಿದ್ದಾಳೆ. ಅದರಿಂದಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಡೆಯ ದಿನ ಹಚ್ಚುವ ದೀಪ, ದೇವರ ಮುಂದೆ ಇಡುವ ಹೂವು ಮುಂದಿನ ವರ್ಷ ಬಾಗಿಲು ತೆಗೆದಾಗಲು ಹಾಗೇ ಇರುತ್ತದೆ ಎಂದರು.
