ಉದಯವಾಹಿನಿ, ಹಾಸನ: ನಿಖಿಲ್ ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಸಿದ ಮೇಲೆ ಕೆಲವರ ಬ್ಯಾಟರಿ ಡೌನ್ ಆಗಿದೆ. ಏನ್ ಗೆದ್ದೇ ಬಿಟ್ವಿ ಎನ್ನುವ ಭ್ರಮೆಯಲ್ಲಿದ್ದರು. ವಾಸ್ತವಿಕ ಪರಿಸ್ಥಿತಿ ಈಗ ಅರ್ಥ ಆಗ್ತಿದೆ. ವಾತಾವರಣ ದಿನೇ ದಿನೇ ಎನ್ಡಿಎ ಅಭ್ಯರ್ಥಿ ಪರ ನಿರ್ಮಾಣವಾಗಿದೆ.ನಿಶ್ಚಿತವಾಗಿ ನಿಖಿಲ್ ಕುಮಾರಸ್ವಾಮಿ ಅವರು ಗೆಲ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಹಾಸನಾಂಬ ದರ್ಶನಕ್ಕೆ ತಂದೆ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಕುಟುಂಬ ಸಮೇತ ಆಗಮಿಸಿ ವಿಶೇಷ ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐತಿಹಾಸಿಕ ಗೆಲುವು ಸಂಡೂರಿನಲ್ಲಿ ಆಗೋದಿದೆ. ಸಂಡೂರಿನಲ್ಲಿ ಬಿಜೆಪಿ ಗೆದ್ದಿರಲಿಲ್ಲ. ಅಲ್ಲೂ ಕೂಡ ಬಿಜೆಪಿ ಗೆಲ್ಲುತ್ತೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ನಿಖಿಲ್ಕುಮಾರಸ್ವಾಮಿ , ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರಿನಲ್ಲಿ ಬಂಗಾರು ಹನುಮಂತು ಅವರು ಸ್ಪರ್ಧಿಸಿದ್ದು, ಮೂರು ಅಭ್ಯರ್ಥಿಗಳು ಚುನಾವಣೆಯಲ್ಲಿ ಯಶಸ್ಸನ್ನು ಕಾಣ್ತಾರೆ, ದೊಡ್ಡ ಅಂತರದಲ್ಲಿ ಗೆಲ್ತಾರೆ ಎಂದು ಹೇಳಿದರು.
ಇವತ್ತು ಚುನಾವಣೆ ಕಾರ್ಯತಂತ್ರ ಯಾವ ರೀತಿ ರೂಪಿಸಬೇಕು ಎಂದು ಎರಡು ಪಕ್ಷದ ನಾಯಕರುಗಳು ಕುಳಿತು ಚರ್ಚೆ ಮಾಡಿದ್ದೇವೆ. ಆ ದಿಕ್ಕಿನಲ್ಲಿ ಎಲ್ಲವೂ ಕೂಡ ಸುಸೂತ್ರವಾಗಿ ನಡೆಯುತ್ತಿದೆ. ನಮಗೆ ಸಂಪೂರ್ಣ ವಿಶ್ವಾಸವಿದೆ. ಏನೇ ಇರಲಿ ಫಲಿತಾಂಶ ನಮ್ಮ ಪರವಾಗಿ ಬರುತ್ತೆ. ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರೈತರ ಜಮೀನು ವಕ್ಫ್ ಹೆಸರಿನಲ್ಲಿರುವ ವಿಚಾರವಾಗಿ, ಪಕ್ಷದ ಹಿರಿಯ ಮುಖಂಡರಾಗಿರುವ ಗೋವಿಂದ ಕಾರಜೋಳ ಅವರ ನೇತೃತ್ವದ ಒಂದು ತಂಡ ಬಿಜಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಭೇಟಿಯನ್ನ ನೀಡಿದ್ದಾರೆ. ಅಲ್ಲಿಯ ರೈತರನ್ನು, ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂದರು.
