ಉದಯವಾಹಿನಿ, ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಹೀಯಾಳಿಸುವ ಪ್ರವೃತ್ತಿ ಬೆಳೆಯುತ್ತಿದೆ. ಇದು ನಾಡದ್ರೋಹ. ಈ ರೀತಿ ಹೀಯಾಳಿಸುವವರ ವಿರುದ್ಧ ರಾಜ್ಯ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ. 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜ ಮತ್ತು ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಕನ್ನಡೇತರರ ಜೊತೆ ಅವರದೇ ಭಾಷೆಯಲ್ಲಿ ಮಾತನಾಡುವ ಬದಲು ಕನ್ನಡ ಕಲಿಸಿ ಕನ್ನಡ ವಾತಾವರಣ ನಿರ್ಮಿಸಿದರೆ ಭಾಷಾ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸ್ವಾತಂತ್ರ್ಯಾ ನಂತರ ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದ ಬಳಿಕ ಕರ್ನಾಟಕ ಎಂದು ನಾಮಕರಣಗೊಂಡಿದೆ. ಅದರ 50ನೇ ವರ್ಷದ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆದರೆ ಅವರು ಅದನ್ನು ಆಚರಣೆ ಮಾಡಲಿಲ್ಲ ಎಂದು ಆಕ್ಷೇಪಿಸಿದ ಅವರು, ತಾವು ಮುಖ್ಯಮಂತ್ರಿಯಾದ ಬಳಿಕ ಹೆಸರಾಯಿತು ಕರ್ನಾಟಕ, ಉಸಿರಾಯಿತು ಕನ್ನಡ ಎಂಬ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ರೂಪಿಸಿದ್ದಾಗಿ ಹೇಳಿದರು.
ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದ್ದು, ಪ್ರಾಚೀನತೆ ಹೊಂದಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿದೆ ಎಂದರು. ಕನ್ನಡಿಗರು ಉದಾರಿಗಳು. ಆದರೆ ನಮ ಭಾಷೆಯನ್ನು ಬಲಿ ಕೊಡುವಷ್ಟು ಉದಾರತೆ ಬೇಡ. ಭಾಷೆಯ ದುರಭಿಮಾನವೂ ಬೇಡ. ಆದರೆ ಅಭಿಮಾನ ಬೇಕೇಬೇಕು. ಭಾಷೆಯನ್ನು ಎತ್ತರಕ್ಕೆ ಕೊಂಡೊಯ್ಯಬೇಕಾದರೆ ಮೊದಲು ನಾವು ಕನ್ನಡಿಗರಾಗಬೇಕು ಎಂದು ಹೇಳಿದರು. ಬೇರೆ ಭಾಷೆಯನ್ನು ಕಲಿತು ಭಾಷಾ ಸಂಪತ್ತನ್ನು ಹೆಚ್ಚಿಸಿಕೊಳ್ಳಬೇಕು. ಆದರೆ ಕನ್ನಡ ಮರೆಯಬಾರದು. ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಹೆಚ್ಚು ಶಕ್ತಿಯುತವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ಮಹಾತಗಾಂಧಿ ಹೇಳಿದ್ದರು ಎಂದು ಸರಿಸಿದರು.
